ಚನ್ನರಾಯಪಟ್ಟಣ: ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮಾಹಿತಿದಾರರ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡುವುದು ಇಲಾಖೆ ಕರ್ತವ್ಯ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಗೌಪ್ಯತೆ ಕಾಪಾಡುವುದು ಅತ್ಯಂತ ಮುಖ್ಯ ಎಂದು ಚನ್ನರಾಯಪಟ್ಟಣ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಜಿ.ಆರ್.ಶಿವಕುಮಾರ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ತಾಲೂಕು ಪತ್ರಕರ್ತರ ಸಂಘದಿಂದ ಪೊಲೀಸ್ ಇಲಾಖೆಯೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ಮಾಹಿತಿದಾರರಿಂದ ಲಭಿಸುವ ಮಾಹಿತಿ ಆಧಾರದಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ. ಸಾರ್ವಜನಿಕರೂ ಯಾವುದೇ ಅಪರಾಧ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಭಯವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಪಟ್ಟಣದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರಿಗೆ ಇಲಾಖೆ ಸಹಕಾರದಿಂದ ಚಾಲನಾ ಪರವಾನಗಿ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಒಂದು ವಾರದ ಕಾಲಾವಕಾಶ ನೀಡಿ, ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸಲು ಪುರಸಭೆ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಖಾಲಿ ಮನೆಗಳ ಮೇಲೆ ನಿಗಾ: ದಸರಾ ರಜೆಯಲ್ಲಿ ಮನೆಗಳನ್ನು ಖಾಲಿ ಮಾಡಿ ಊರಿಗೆ ತೆರಳುವವರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಗರ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಎಂ ರಘುಪತಿ ಮನವಿ ಮಾಡಿದರು. ಮನೆ ಖಾಲಿಯಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿ ಲಾಕ್ಡ್‌ಹೌಸ್ ಬೀಟ್ ಸಿಸ್ಟಂ ಸೇವೆ ಬಳಸಿಕೊಳ್ಳಬಹುದು. ಇದರಿಂದ ಬೀಟ್ ಪೊಲೀಸರು ಖಾಲಿ ಮನೆಗಳ ಮೇಲೆ ನಿಗಾ ವಹಿಸಲು ಸಾಧ್ಯ ಎಂದರು.
ಮನೆಯಿಂದ ತೆರಳುವ ಮುನ್ನ ಬಾಗಿಲು, ಕಿಟಕಿಗಳನ್ನು ಭದ್ರಪಡಿಸಬೇಕು. ಜತೆಗೆ ಸಿಸಿಟಿವಿ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಬೇಕು. ಪ್ರವಾಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಚಿತವಾಗಿ ಹಂಚಿಕೊಳ್ಳದಂತೆ ಸಲಹೆ ನೀಡಿದರು.
112 ಸೇವೆ ದುರ್ಬಳಕೆ ಬೇಡ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ 112 ಸೇವೆ ಬಳಕೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಅನಗತ್ಯ ಹಾಗೂ ಸುಳ್ಳು ಕರೆಗಳಿಂದ ನಿಜವಾದ ತುರ್ತು ಸಂದರ್ಭದಲ್ಲಿರುವವರಿಗೆ ನೆರವು ತಲುಪಲು ವಿಳಂಬವಾಗಬಹುದು ಎಂದು ಎಚ್ಚರಿಸಿದರು.
ಪಂಪ್‌ಸೆಟ್ ವಯರ್ ಕಳವು ತಡೆಗೆ ಗಸ್ತು: ಗ್ರಾಮಾಂತರ ಪ್ರದೇಶಗಳಲ್ಲಿ ಮೋಟಾರ್ ಪಂಪ್‌ಸೆಟ್‌ಗಳ ವಿದ್ಯುತ್ ವಯರ್ ಕಳವು ತಡೆಗೆ ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದು ಗ್ರಾಮಾಂತರ ಠಾಣಾ ಪೋಲಿಸ್ ನಿರೀಕ್ಷಕ ಕೆ.ಇ.ನಿರಂಜನ್ ಕುಮಾರ್ ತಿಳಿಸಿದರು. ಜಮೀನುಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.