ಶ್ರವಣಬೆಳಗೊಳ: ಭಾರತೀಯ ಧಾರ್ಮಿಕ ಆಚರಣೆಗಳು, ಪ್ರಾಚೀನ ಸಂಪ್ರದಾಯಗಳು ಕೇವಲ ಮೂಢನಂಬಿಕೆಗಳಲ್ಲ. ಅವುಗಳ ಹಿಂದೆ ಆಳವಾದ ವೈಜ್ಞಾನಿಕ ತಳಪಾಯ ಹಾಗೂ ಆರೋಗ್ಯಕರ ಜೀವನ ಶೈಲಿಯ ಸಂದೇಶ ಅಡಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹರ್ಜಿತ್ ಸಿಂಗ್ ಗ್ರೆವಾಲ್ ಅಭಿಪ್ರಾಯಪಟ್ಟರು.
ಶ್ರವಣಬೆಳಗೊಳದ ಧವಲತೀಥರ್ಂನಲ್ಲಿರುವ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ದೇವಾಲಯಗಳಲ್ಲಿ ಗಂಟೆ ಬಾರಿಸುವುದರಿಂದ ಹಿಡಿದು ಯಜ್ಞ-ಯಾಗಾದಿಗಳು, ಯೋಗಾಭ್ಯಾಸದವರೆಗೆ ಭಾರತೀಯ ಪರಂಪರೆಯ ಪ್ರತಿಯೊಂದು ಆಚರಣೆಯ ಹಿಂದೆ ವಿಶೇಷ ಅರ್ಥ ಮತ್ತು ವೈಜ್ಞಾನಿಕ ಚಿಂತನೆ ಇದೆ. ಅಗ್ನಿ ಹಾಗೂ ಮಂತ್ರೋಚ್ಚಾರಣೆಯಿಂದ ಉಂಟಾಗುವ ಕಂಪನಗಳು ಪ್ರಕೃತಿಯ ಮೇಲಿನ ಪ್ರಭಾವವನ್ನು ಪ್ರಾಚೀನ ಋಷಿಮುನಿಗಳು ಅರಿತುಕೊಂಡಿದ್ದರು. ಇಂತಹ ಪರಂಪರೆಯ ವೈಶಿಷ್ಟ್ಯವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಜೈನ ಧರ್ಮದ ತತ್ವಗಳು ಮತ್ತು ಆಚರಣೆಗಳು ಜೀವನವನ್ನು ಶಿಸ್ತಿನಿಂದ ನಡೆಸಲು ಮಾರ್ಗದರ್ಶನ ನೀಡುತ್ತವೆ. ಸೂರ್ಯಾಸ್ತದ ನಂತರ ಭೋಜನ ಮಾಡದಿರುವ ಸಂಪ್ರದಾಯವು ಆರೋಗ್ಯಕರ ಜೀವನ ಶೈಲಿಗೆ ಪೂರಕವಾಗಿದೆ. ಇಂತಹ ಉತ್ತಮ ಸಂಸ್ಕಾರಗಳನ್ನು ಮಕ್ಕಳು ಮತ್ತು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಪ್ರಗತಿಗೆ ಶಿಸ್ತು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಿಖ್ ಮತ್ತು ಜೈನ ಧರ್ಮಗಳ ನಡುವೆ ಬಹುಕಾಲದಿಂದಲೂ ಉತ್ತಮ ಬಾಂಧವ್ಯ ಹಾಗೂ ಐತಿಹಾಸಿಕ ಸಂಬಂಧವಿದೆ. ಶ್ರವಣಬೆಳಗೊಳವು ಸುಮಾರು 2,300 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಆಧ್ಯಾತ್ಮಿಕ ಪರಂಪರೆ ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಆಚಾರ್ಯ ಭದ್ರಬಾಹು ಸ್ವಾಮಿಗಳ ಮಾರ್ಗದರ್ಶನದಲ್ಲಿ ಚಂದ್ರಗುಪ್ತ ಮೌರ್ಯರು ಈ ಕ್ಷೇತ್ರಕ್ಕೆ ಆಗಮಿಸಿ ಜೈನ ಧರ್ಮದ ದೀಕ್ಷೆ ಸ್ವೀಕರಿಸಿದ ಐತಿಹಾಸಿಕ ಪರಂಪರೆ ಈ ನೆಲದ ಮಹತ್ವವನ್ನು ಹೆಚ್ಚಿಸಿದೆ ಎಂದರು.
ವಿದ್ಯಾದಾನವು ಸಮಾಜಕ್ಕೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಉತ್ತಮ ಗುರುಗಳು ದೊರೆತಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಭಾರತವು ವಿಶ್ವಗುರುವಾಗಿ ಹೊರಹೊಮ್ಮಬೇಕಾದರೆ ಪ್ರಾಚೀನ ಭಾರತೀಯ ಸಂಸ್ಕೃತಿ, ಪರಂಪರೆ, ನೈತಿಕ ಮೌಲ್ಯಗಳು ಮತ್ತು ಶಿಸ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆಧುನಿಕ ಶಿಕ್ಷಣದ ಜತೆಗೆ ಸಂಸ್ಕಾರಯುತ ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುಂಡಲೀಕ ಅನವಲ್, ಹಾಸನ ಜಿಲ್ಲಾ ಅಧಿಕಾರಿ ಗುಡ್ಡಪ್ಪ ಜಿಂಗಲಪ್ಪ, ಆಲೂರು ತಹಸೀಲ್ದಾರ್ ಮಲ್ಲಿಕಾರ್ಜುನ್, ಸಂದೀಪ್ ಮಲಾನ, ಆರ್ಎಸ್ಎಸ್ ಮುಖಂಡ ಗೋಪಾಲಕೃಷ್ಣ, ವಿನೋದ್ ಬಾಕ್ಲಿವಾಲ್ ಉಪಸ್ಥಿತರಿದ್ದರು.