ಬೇಲೂರು: ತಾಲೂಕಿನಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಕೋಗೋಡು-ಅರಮನೆ ಗುಡ್ಡದ ಮೂಲಕ ಮೂಡಿಗೆರೆಯ ತತ್ಕೊಳ ಅರಣ್ಯದ ಮುಖೇನ ಭದ್ರ ಅಭಯಾರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೆ ಮುಂದುವರಿಯಲಿದೆ.
ಅರಣ್ಯ ಇಲಾಖೆ ಸಿಬ್ಬಂದಿ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ 38 ಕಾಡಾನೆಗಳನ್ನು ಮೂಡಿಗೆರೆಯ ತತ್ಕೊಳ ಅರಣ್ಯದತ್ತ ಓಡಿಸಿದ್ದು, ಅಲ್ಲಿಂದ್ದ ಭದ್ರ ಅಭಯಾರಣ್ಯಕ್ಕೆ ಓಡಿಸುವ ಪ್ರಕ್ರಿಯೆ ಮುಂದುವರಿದಿದೆ.
ಬುಧವಾರ ಸಂಜೆ ಹಿರಿಯ ಅಧಿಕಾರಿಗಳು ಬಿಕ್ಕೋಡು ಸಮೀಪದ ಆನೆ ಕ್ಯಾಂಪಿನಲ್ಲಿ ಸಭೆ ನಡೆಸಿ, ಕಾಡಾನೆಗಳ ಹಿಂಡುಗಳಿರುವ ಬಗ್ಗೆ ಥರ್ಮಲ್ ಡ್ರೋನ್ ಕ್ಯಾಮರಾ ಮೂಲಕ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಹೇಗೆ ಕಾಡಾನೆಗಳನ್ನು ಓಡಿಸಬೇಕೆಂದು ಚರ್ಚಿಸಿದರು.
ಸಿಸಿಎಫ್ ಏಡುಕೊಂಡಲು, ಡಿಎಫ್ಓ ಹರೀಶ್, ಎಸಿಎಫ್ಗಳಾದ ಮೋಹನ್ ಕುಮಾರ್, ಖಲಂದರ್, ಮಧುಸೂದನ್, ಆರ್ಎಫ್ಒ ಯತೀಶ್ ಸೇರಿದಂತೆ ಪೊಲೀಸರು, 150ಕ್ಕೂ ಹೆಚ್ಚಿನ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಗ್ನಿಶಾಮಕದಳ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದರ ನಡುವೆ ಬೇಲೂರಿನಿಂದ ಮೂಡಿಗೆರೆಯತ್ತ ಹೋದ ಕಾಡಾನೆಗಳ ಹಿಂಡು ಅಲ್ಲಿಯೂ ಬೆಳೆ ನಾಶ ಪಡಿಸುತ್ತಿರುವುದರಿಂದ ಆ ಭಾಗದ ಸಾರ್ವಜನಿಕರು ಅರಣ್ಯ ಇಲಾಖೆಯ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಮೂಡಿಗೆರೆ ಬಂದ್ ಮಾಡಿ ಪ್ರತಿಭಟಿಸಿದರು.
ಮತ್ತೊದೆಂಡೆ, ತತ್ಕೊಳ ಅರಣ್ಯದತ್ತ ಹೋಗಿದ್ದ ಕಾಡಾನೆಗಳನ್ನು ಅಲ್ಲಿನ ಸ್ಥಳೀಯರು ಬೆದರಿಸಿ, ಪಟಾಕಿ ಸಿಡಿಸಿ ವಾಪಸ್ ಓಡಿಸುತ್ತಿರುವುದರಿಂದ ಕಾಡಾನೆಗಳ ಹಿಂಡು ಮೂಡಿಗೆರೆ ತಾಲೂಕಿನ ಗಡಿ ಭಾಗದ ಮಾಕೋನಹಳ್ಳಿ ಹಾಗೂ ಕಾಡ್ಬೈಲ್ ಗ್ರಾಮಗಳತ್ತ ನುಗ್ಗಿವೆ. ಆದರೆ, ಈ ಕಾಡಾನೆಗಳ ಹಿಂಡಿನ ಜತೆಯೇ ಹೋಗಿದ್ದ ಶಾಂತ ಸ್ವಭಾವದ ಭೀಮ ಆನೆ ಮಾತ್ರ ಒಬ್ಬಂಟಿಯಾಗಿ ವಾಪಸ್ ಬಂದಿದ್ದು, ಬೇಲೂರು-ಸಕಲೇಶಪುರ ಗಡಿ ಭಾಗದ ಗ್ರಾಮದಲ್ಲಿ ಕಣಿಸಿಕೊಂಡಿದೆ.
ತಾಲೂಕಲ್ಲೇ ಉಳಿದ 18 ಕಾಡಾನೆ: ಇನ್ನು, ಬೇಲೂರು ತಾಲೂಕಿನಲ್ಲೇ ಉಳಿದಿರುವ 15 ರಿಂದ 18 ಕಾಡಾನೆಗಳನ್ನು ಬುಧವಾರ ರಾತ್ರಿ ಮೂಡಿಗೆರೆಯತ್ತ ಓಡಿಸುವ ಕಾರ್ಯಾಚರಣೆ 9ನೇ ದಿನವಾದ ಬುಧವಾರವೂ ಮುಂದುವರಿತ್ತು.