ಬೇಲೂರು ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ತೀರ್ಥಕುಮಾರಿ ಹಾಗೂ ಎ.ಆರ್.ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. 
ಹಾಸನ

ಬೇಲೂರಲ್ಲಿ ಹೆಚ್ಚಿದ ಕಳಪೆ ಕಾಮಗಾರಿ

ಪುರಸಭೆ ಸದಸ್ಯರ ಆರೋಪ, ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಸ್ಯೆ ಹೇಳಿಕೊಂಡ ಜನಪ್ರತಿನಿಧಿಗಳು

ಬೇಲೂರು: ಇತ್ತೀಚಿನ ದಿನಗಳಲ್ಲಿ ವಿವಿಧ ಯೋಜನೆಗಳ ಕಾಮಗಾರಿ ಕಳಪೆಯಾಗಿರುವುದು ಜಗಜ್ಜಾಹೀರಾಗಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು, ಇಂಜಿನಿಯರ್ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಆರೋಪ ಪುರಸಭೆ ಸಮಾನ್ಯ ಸಭೆಯಲ್ಲಿ ಕೇಳಿಬಂತು.

ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎ.ಆರ್.ಅಶೋಕ್, ಪಟ್ಟಣದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಸಿಮೆಂಟ್ ರಸ್ತೆ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆಗಳಲ್ಲಿ ಧೂಳು, ಅಲ್ಲಲ್ಲಿ ಜಲ್ಲಿ ಕಲ್ಲುಗಳು ಏಳುತ್ತಿವೆ. ಹೀಗಾದರೆ ಜನರು ಓಡಾಡುವುದಾದರೂ ಹೇಗೆ? ಈ ಬಗ್ಗೆ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪಟ್ಟಣದ ಮುಖ್ಯರಸ್ತೆಯಲ್ಲಿ ಜಲ್ಲಿಕಲ್ಲು ತುಂಬಿಕೊಂಡು ಹೋಗುವ ಟಿಪ್ಪರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರಿದರು.

ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪುರಸಭೆಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿಯ ಬಡಾವಣೆಗಳಿಗೆ ಪುರಸಭೆಯಿಂದ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಕಸ ಸಂಗ್ರಹಣೆಗೆ ಆಟೋ ಮನೆ ಬಾಗಿಲಿಗೆ ಹೋದರೂ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ. ಆದ್ದರಿಂದ ಅಂತಹ ಬಡಾವಣೆಗಳನ್ನು ಪುರಸಭೆಗೆ ಸೇರಿಸಿಕೊಂಡರೆ ಆದಾಯವೂ ಬಂದಂತ್ತಾಗುತ್ತದೆ, ಜತೆಗೆ ಸ್ವಚ್ಛತೆ ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

7ನೇ ವಾರ್ಡ್‌ನ ಗುರಪ್ಪಗೌಡರ ಬೀದಿಯಲ್ಲಿ ಸಿಮೆಂಟ್ ರಸ್ತೆ ಮಾಡಿದ್ದು ವಾಹನಗಳು ಸಂಚರಿಸಿದರೆ ಧೂಳು ಬರುತ್ತಿದೆ. ಕೆಲಸ ಮಾಡಿಸಿದವರು ಏಕೆ ಹೀಗೆ ಮಾಡಿದ್ದಾರೋ ತಿಳಿಯುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಕೆಲಸ ಕಳಪೆಯಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಇಂಜಿನಿಯರ್, ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರನ ಬಿಲ್ ತಡೆ ಹಿಡಿಯಬೇಕು. ಈಗ ಬಂದಿರುವ ಅನುದಾನದಲ್ಲಿ ಎಲ್ಲ 23 ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಕ್ರಿಯಾ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಜಮಾಲೂದ್ದೀನ್ ಮಾತನಾಡಿ, ಪುರಸಭೆಗೆ ಹೊಂದಿಕೊಂಡಿರುವ ಗ್ರಾಪಂ ಪ್ರದೇಶದವರಿಗೆ ನಮ್ಮಿಂದ ಸೌಲಭ್ಯ ಸಿಗುತ್ತಿದೆ. ಈ ಬಗ್ಗೆ ಜಿಪಂ ಸಿಇಒಗೆ ಪತ್ರ ಬರೆದು ಗಡಿ ಭಾಗದ ಮನೆ, ನಿವೇಶನಗಳನ್ನು ಪುರಸಭೆಗೆ ಸೇರಿಸಲು ಅನುವು ಮಾಡುವಂತೆ ಒತ್ತಾಯಿಸಬೇಕು ಎಂದರು.

ಜಗದೀಶ್ ಮಾತನಾಡಿ, ಪಟ್ಟಣದಲ್ಲಿ ಕೆಲವೆಡೆ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಹಾಕುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದರು.

ಸದಸ್ಯ ಶ್ರೀನಿವಾಸ್ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲು ಆಟೋಗಳು ಸರಿಯಾದ ಸಮಯಕ್ಕೆ ಬಾರದಿರುವುದೇ ಕಾರಣ.ಇದನ್ನು ತಪ್ಪಿಸಲು ಆಟೋಗಳು ಸರಿಯಾದ ಸಮಯಕ್ಕೆ ಬಂದರೆ ಮಾತ್ರ ಕಸ ಹಾಕುವುದನ್ನು ತಪ್ಪಿಸಲು ಸಾಧ್ಯ ಎಂದರು. ಸದಸ್ಯೆ ಮೀನಾಕ್ಷಿ ವೆಂಕಟೇಶ್ ಇತರರಿದ್ದರು.

ಉದ್ಘಾಟನೆ ಕಾಣದ ನೀರಿನ ಘಟಕ

ವಿವಿಧ ಕೆಲಸಗಳಿಗೆ ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸ್ವಂತ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಂದಿನ ತಹಸೀಲ್ದಾರ್ ಮಮತಾ ಅನುಮತಿ ಪಡೆದು ನಿರ್ಮಿಸಿದ್ದೆವು. ಆದರೆ, ಅದು ಇಲ್ಲಿಯವರೆಗೂ ಉದ್ಘಾಟನೆಯಾಗಿಲ್ಲ. ಈ ವಿಚಾರವಾಗಿ ಶಾಸಕರ ಮನೆಗೂ ಹೋಗಿ ಬಂದರೂ ಪ್ರಯೋಜನವಾಗಿಲ್ಲ. ಶಾಸಕರು ಡಿಸಿಗೆ ಫೋನ್ ಮಾಡಿ ಇಲ್ಲಸಲ್ಲದ್ದನ್ನು ಹೇಳಿದ್ದರಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಶಾಸಕರೆ ಅಡ್ಡಿಯಾಗಿದ್ದಾರೆ ಎಂದು ತೀರ್ಥಕುಮಾರಿ ವೆಂಕಟೇಶ್ ಆರೋಪಿಸಿದರು.

ಈ ವೇಳೆ ಎ.ಆರ್.ಅಶೋಕ್ ಮಧ್ಯ ಪ್ರವೇಶಿಸಿ, ಇಲ್ಲಿ ಶಾಸಕರ ಹೆಸರು ತರಬೇಡಿ. ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಆಗದಿರಲು ಮಾಜಿ ಸಚಿವ ಬಿ.ಶಿವರಾಂ ಕಾರಣ ಎನ್ನುತಿದ್ದಂತೆ ತೀರ್ಥಕುಮಾರಿ ಹಾಗೂ ಎ.ಆರ್.ಅಶೋಕ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಮಧ್ಯೆ ಜಮಾಲೂದ್ದೀನ್ ಮಾತನಾಡಿ, ವೈಯಕ್ತಿಕ ವಿಚಾರ ತರಬೇಡಿ ಎಂದು ಇಬ್ಬರನ್ನು ಸಮಾಧಾನಪಡಿಸಿದರು. ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಘಟಕ ಉದ್ಘಾಟನೆಗೆ ಶಾಸಕರೊಂದಿಗೆ ಚರ್ಚಿಸುತ್ತೇವೆ ಎಂದರು.

ಘನತ್ಯಾಜ್ಯ ಘಟಕದಲ್ಲಿ ಕೆಲಸ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ಶೌಚಗೃಹ ನಿರ್ಮಿಸಬೇಕು. ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಗಮನಹರಿಸಿ ಉತ್ತಮ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸುವ ಕ್ರಮಕ್ಕೆ ಮುಂದಾಗಬೇಕು. ಪೌರಕಾರ್ಮಿಕರ ಮಕ್ಕಳಿಗೆ ಪಟ್ಟಣದಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಕೊಡಿಸಲು ಅಧಿಕಾರಿಗಳು ಮುಂದಾಗುವ ಮೂಲಕ ಅವರ ಮಕ್ಕಳ ಭವಿಷ್ಯ ರೂಪಿಸಬೇಕು. ತೀರ್ಥಕುಮಾರಿ ವೆಂಕಟೇಶ್, ಪುರಸಭೆ ಸದಸ್ಯೆ