ಹಾಸನ: ಬಸ್ ದರ ಏರಿಕೆ ವಿಚಾರವಾಗಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನಾಂಬ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗಗಳಿಗೆ ಬಸ್ಗಳನ್ನು ಕಡಿತಗೊಳಿಸಿರುವುದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಇಲಾಖೆಗೆ ಸರ್ಕಾರದಿಂದ ಸುಮಾರು 2 ಸಾವಿರ ಕೋಟಿ ರೂಪಾಯಿ ಹಣ ಬರಬೇಕಿದೆ. ಡೀಸೆಲ್ ಖರೀದಿಗೂ ಸರ್ಕಾರ ಹಣ ನೀಡಿಲ್ಲ. ಯಂತ್ರೋಪಕರಣ ಖರೀದಿಸಲು ಹಣವಿಲ್ಲದೆ, ತಾಂತ್ರಿಕ ಸಿಬ್ಬಂದಿಗೂ ಸಂಬಳ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಬಸ್ ದರ ಏರಿಕೆ ಮಾಡಿರುವುದು ಸರಿಯಲ್ಲ. ಕೂಡಲೇ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದರ ಜೊತೆಗೆ, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ ಎಂದರು.