ಹೊಳೆನರಸೀಪುರ ಪಟ್ಟಣದ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನ ಆಚರಿಸಲಾಯಿತು. ಶಾಸಕ ಎಚ್.ಡಿ.ರೇವಣ್ಣ, ಮುಖ್ಯಾಧಿಕಾರಿ ಶಿವಶಂಕರ್ ಇದ್ದರು. 
ಹಾಸನ

ಪೌರಕಾರ್ಮಿಕರಿಗೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಿ

ಶಾಸಕ ಎಚ್.ಡಿ.ರೇವಣ್ಣ ಹೇಳಿಕೆ

ಹೊಳೆನರಸೀಪುರ: ಸರ್ಕಾರ ಪೌರಕಾರ್ಮಿಕರಿಗೆ ದೊರಕಬೇಕಾದ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ಪುರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಅವಿರತ ಶ್ರಮ ಹಾಕುತ್ತಿದ್ದಾರೆ. ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದ ವತಿಯಿಂದ ಧನಸಹಾಯ ಕೊಡಿಸಲಾಗುವುದು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ನಿಮ್ಮ ಮಕ್ಕಳು ಉನ್ನತ ಶಿಕ್ಷಣ ಮಾಡಿದರೆ ಅಂತಹ ಮಕ್ಕಳಿಗೆ ಸರ್ಕಾರದ ವತಿಯಿಂದ ಯಾವುದಾದರೂ ಒಂದು ಹುದ್ದೆ ಕೊಡಿಸಲು ಪ್ರಯತ್ನಿಸುತ್ತೇನೆ. ಪದವಿ, ಪಿಯು, ಎಸ್‌ಎಸ್‌ಎಲ್‌ಸಿ ಓದುತ್ತಿರುವ 15 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಜಾನಪದ ಕಲಾ ತಂಡಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಡಾ.ಬಾಬು ಜಗ ಜೀವನ ರಾಮ್ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪೌರಕಾರ್ಮಿಕರಿಗೆ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಯು.ಎನ್.ಶಿವಶಂಕರ್, ಸಮುದಾಯ ಸಂಘಟನಾಧಿಕಾರಿ ಎನ್.ಆರ್.ಪಂಕಜಾ, ಸಮುದಾಯ ಸಂಘಟಕ ಎನ್.ಎಂ.ರಮೇಶ್, ಆರೋಗ್ಯ ನಿರೀಕ್ಷಕರ ವಸಂತ್ ಕುಮಾರ್, ಪುರಸಭೆ ಮೇಸ್ತ್ರಿಗಳಾದ ನಾಗಮ್ಮ, ಮಾದಯ್ಯ, ಕಿರಣ್, ಚೆಲುವ ಉಪಸ್ಥಿತರಿದ್ದರು.