ಚನ್ನರಾಯಪಟ್ಟಣದ ರೇಣುಕಾ ನಗರ, ಬಸವನಕಟ್ಟೆ ಸಂತೆ ಮೈದಾನದಲ್ಲಿರುವ ಪೌರಕಾರ್ಮಿಕರ ಸಮುದಾಯ ಭವನದ ಉಳಿಕೆ ಕಾಮಗಾರಿ ಹಾಗೂ ಮರುನಿರ್ಮಾಣ ಕಾರ್ಯಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ರಾಣಿಕೃಷ್ಣ, ಕೃಷ್ಣ, ಶಾಮಿಯಾನ ರಘು, ಸಿ.ಎಸ್. ಪ್ರಕಾಶ್, ಬಸವರಾಜು, ಗಿರೀಶ್ ಹಾಗೂ ಪೌರಕಾರ್ಮಿಕರು ಇದ್ದರು. 
ಹಾಸನ

ಪೌರಕಾರ್ಮಿಕರ ಸಮುದಾಯ ಭವನಕ್ಕೆ ಅನುದಾನ

ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

ಚನ್ನರಾಯಪಟ್ಟಣ: ಪಟ್ಟಣದ ಪೌರಕಾರ್ಮಿಕರ ಸಮುದಾಯ ಭವನದ ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಪುರಸಭೆಯ ಎಸ್‌ಸಿಪಿ/ಟಿಎಸ್‌ಪಿ ಅನುದಾನದಡಿ ಹೆಚ್ಚುವರಿಯಾಗಿ 10 ಲಕ್ಷ ರೂ. ಒದಗಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ರೇಣುಕಾನಗರ, ಬಸವನಕಟ್ಟೆ, ಸಂತೆ ಮೈದಾನದಲ್ಲಿರುವ ಪೌರಕಾರ್ಮಿಕರ ಸಮುದಾಯ ಭವನದ ಉಳಿಕೆ ಕಾಮಗಾರಿ ಹಾಗೂ ಮರುನಿರ್ಮಾಣ ಕಾರ್ಯಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹಿಂದೆ ನಿರ್ಮಿಸಲಾಗಿದ್ದ ಸಮುದಾಯ ಭವನವನ್ನು ಪ್ರಸ್ತುತ ಪುರಸಭೆಯ ಎಸ್‌ಸಿಪಿ/ಟಿಎಸ್‌ಪಿ ಅನುದಾನದಡಿ 30 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಪೌರಕಾರ್ಮಿಕರು ಹಾಗೂ ಸ್ಥಳೀಯ ನಾಗರಿಕರಿಗೆ ಶುಭಕಾರ್ಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮಗಳ ವೇಳೆ ಊಟದ ವ್ಯವಸ್ಥೆ ಮಾಡಲು ಸೂಕ್ತ ಹಾಲ್ ಇಲ್ಲದಿರುವುದನ್ನು ಗಮನಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಊಟದ ಹಾಲ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ. ನವೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಸಮುದಾಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಲು ಅನುಕೂಲವಾಗಲಿದೆ ಎಂದ ಅವರು, ಮುಂದಿನ ಹಂತದಲ್ಲಿ ಸೀಲಿಂಗ್, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಸೂಚಿಸದರು.

ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಪ್ರಕಾಶ್, ಅಭಿಯಂತರರಾದ ಗಿರೀಶ್, ಬಸವರಾಜು, ಮಾಜಿ ಅಧ್ಯಕ್ಷ ರಾಣಿಕೃಷ್ಣ, ಮುಖಂಡರಾದ ಕೃಷ್ಣ, ಶಾಮಿಯಾನ ರಘು, ಗುತ್ತಿಗೆದಾರ ಅಜರ್ ಖಾನ್, ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.