ಅರಕಲಗೂಡಿನಲ್ಲಿ ಶನಿವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕ ಮಹಿಳೆ ಕಮಲಮ್ಮ ಅವರನ್ನು ಸನ್ಮಾನಿಸಲಾಯಿತು. ಎ. ಮಂಜು, ನಾಗೇಂದ್ರಕುಮಾರ್, ರವಿ, ವೆಂಕಟೇಶ್ ಇತರರಿದ್ದರು. 
ಹಾಸನ

ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಶಾಸಕ ಎ.ಮಂಜು ಅಭಿಪ್ರಾಯ

ಅರಕಲಗೂಡು: ಪಟ್ಟಣ ಸ್ವಚ್ಛ ಹಾಗೂ ಸುಂದರವಾಗಿ ಕಾಣಲು ಪೌರಕಾರ್ಮಿಕರ ಶ್ರಮವೇ ಪ್ರಮುಖ ಕಾರಣ. ಸಾರ್ವಜನಿಕರು ತಮ್ಮ ಮನೆ ಮುಂದೆ ಸ್ವಚ್ಛತೆ ಮಾಡಿಕೊಳ್ಳುವುದಕ್ಕೂ ಕೆಲವೊಮ್ಮೆ ಹಿಂದೇಟು ಹಾಕುತ್ತಾರೆ. ಆದರೆ ಪೌರ ಕಾರ್ಮಿಕರು ಪ್ರತಿದಿನ ಬೆಳಗಿನ ಪಟ್ಟಣದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡು ಆರೋಗ್ಯಕರ ವಾತಾವರಣ ನಿರ್ಮಿಸುತ್ತಿದ್ದಾರೆ. ಅವರೊಂದಿಗೆ ಸಾರ್ವಜನಿಕರೂ ಶ್ರಮದಾನಕ್ಕೆ ಕೈಜೋಡಿಸಿದರೆ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯ ಎಂದು ಶಾಸಕ ಎ.ಮಂಜು ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮೊದಲು ಪೌರಕಾರ್ಮಿಕರಿಗೆ ಗೌರವ ನೀಡಬೇಕು. ಅವರ ನಿಸ್ವಾರ್ಥ ಸೇವೆ ಹಾಗೂ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಪೌರ ಕಾರ್ಮಿಕರಿಗೆ ಅನುಕೂಲವಾಗುವಂತೆ ಎರಡು ಎಕರೆ ಜಮೀನು ಮೀಸಲಿರಿಸಿ ನೀಡುವ ಕುರಿತು ಸಚಿವರೊಂದಿಗೆ ಚರ್ಚಿಸಲಾಗಿದ್ದು, ಪುರಸಭೆ ಮುಖ್ಯಾಧಿಕಾರಿಗಳು ಸೂಕ್ತ ಜಾಗ ಗುರುತಿಸಬೇಕು. ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಜಾಗವನ್ನು ಪುರಸಭೆಯ ಸುಪರ್ದಿಗೆ ನೀಡುವ ಬಗ್ಗೆಯೂ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ನಿವೇಶನ ರಹಿತರಿಗೆ ಹಂದಿಕಟ್ಟೆ ಬಾರೆ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಮನೆಗಳನ್ನು ನಿರ್ಮಿಸುವ ಉದ್ದೇಶವಿದ್ದು, ಅಗತ್ಯ ಆಸ್ಪತ್ರೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪೌರಕಾರ್ಮಿಕರು ಸಮಾಜದ ಆಸ್ತಿ: ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಸಮಾಜದ ಆಸ್ತಿಯಾಗಿದ್ದು, ಪ್ರತಿದಿನ ಪಟ್ಟಣವನ್ನು ಸ್ವಚ್ಛಗೊಳಿಸಿ ಮನೆಗೆ ತೆರಳುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತದೆ. ಹಿಂದೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಪೌರಕಾರ್ಮಿಕರಿಗೆ ಇಪಿಎಫ್ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಸಮಾಜದ ಕಣ್ಣಿಗೆ ಕಾಣದಂತೆ ಕೆಲಸ ಮಾಡುತ್ತಿದ್ದ ಅವರ ಸೇವೆಯನ್ನು ಸರ್ಕಾರ ಗುರುತಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.

ಸರ್ಕಾರ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸಿದೆ. ಗೃಹ ಭಾಗ್ಯ ಯೋಜನೆಯಡಿ ಉಚಿತ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಿಸಲು 7.50 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಅರಕಲಗೂಡಿನಲ್ಲಿ ಇಬ್ಬರಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಸರ್ಕಾರದ ವಿವಿಧ ಸೌಲಭ್ಯಗಳು ಅರ್ಹ ಪೌರಕಾರ್ಮಿಕರಿಗೆ ತಲುಪುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕ ಮಹಿಳೆ ಕಮಲಮ್ಮ ಅವರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.

ಮುಖಂಡರಾದ ನರಸೇಗೌಡ, ಕೀರ್ತಿರಾಜ್, ಪುಟ್ಟರಾಜು, ರವಿ, ವೆಂಕಟೇಶ್, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.