ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕರಾದ ಶಿಕ್ಷಕಿ ರತ್ನಮ್ಮ ಹಾಗೂ ತಿಮ್ಮಪ್ಪ ಅವರಿಗೆ ಆಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೀವಮಾನ ಸಾಧನಾ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿ.ಎಂ. ವರದರಾಜು, ಶಾಂತಕೃಷ್ಣ, ಎಂ.ಆರ್.ಶ್ರೀನಿವಾಸ್, ಬಿ.ಆರ್.ಧರ್ಮ, ಎಂ.ಆರ್.ವೇಣುಗೋಪಾಲ, ಸಿ.ಎಸ್.ಅಣ್ಣಪ್ಪ ಇತರರಿದ್ದರು.  
ಹಾಸನ

ನಿಷ್ಠೆಯ ಕಾರ್ಯದಿಂದ ಆತ್ಮತೃಪ್ತಿ ಸಾಧ್ಯ

ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು ಅಭಿಮತ

ಆಲೂರು: ಸರ್ಕಾರಿ ನೌಕರರಿಗೆ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಕಾರ್ಯದಕ್ಷತೆ ಬಹಳ ಮುಖ್ಯ. ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಆತ್ಮತೃಪ್ತಿ ಕಾಣಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಆಲೂರು ತಾಲೂಕು ಘಟಕದ ಅಧ್ಯಕ್ಷ ಡಿ.ಎಂ. ವರದರಾಜು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದ ನಿಡನೂರು ಶಾಲೆ ಶಿಕ್ಷಕಿ ರತ್ನಮ್ಮ ಹಾಗೂ ಕೊಡಿಗಿಹಳ್ಳಿ ಶಾಲೆಯ ಶಿಕ್ಷಕ ತಿಮ್ಮಪ್ಪ ಅವರಿಗೆ ನೌಕರರ ಸಂಘದ ಆಲೂರು ತಾಲೂಕು ಘಟಕದಿಂದ ಪಟ್ಟಣದ ನೌಕರರ ಭವನದಲ್ಲಿ ಆಯೋಜಿಸಿದ್ದ ಜೀವಮಾನ ಸಾಧನಾ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರಕ್ಕೆ ರತ್ನಮ್ಮ ಹಾಗೂ ತಿಮ್ಮಪ್ಪ ಅವರ ಕೊಡುಗೆ ಅಪಾರವಾಗಿದೆ. ಎಲ್ಲ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ನಮ್ಮಿಂದ ಕಲಿತ ಸಾವಿರಾರು ಮಕ್ಕಳು ಸಮಾಜದ ವಿವಿಧ ಸ್ತರಗಳಲ್ಲಿ ಕಾಯಕನಿರತರಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಲು ರಹದಾರಿಯಾಗುತ್ತದೆ ಎಂದರು.

ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಶಾಂತಕೃಷ್ಣ ಮಾತನಾಡಿ, ವರದರಾಜು ಅವರು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಂತರ ಭವನದ ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಲೂರು ತಾಲೂಕು ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಬಿ.ಆರ್.ಧರ್ಮ, ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಆರ್.ವೇಣುಗೋಪಾಲ, ಜಿಲ್ಲಾ ಶಿಕ್ಷಕರ ಸಂಘದ ಲೆಕ್ಕ ಪರಿಶೋಧಕ ಸಿ.ಎಸ್.ಅಣ್ಣಪ್ಪ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಶಾಲಾ ಶಿಕ್ಷಣ ಸಂಘದ ತಾಲೂಕು ಅಧ್ಯಕ್ಷ ಭೂಪಾಲಯ್ಯ, ವಿವಿಧ ಶಾಲೆಗಳ ಶಿಕ್ಷಕರಾದ ರವಿ, ಚಂದ್ರಕುಮಾರ್, ಎಸ್.ಎಂ. ನಾಗರಾಜ್, ಸಹನಾ, ಹರೀಶ್, ಪವನ್ ಕುಮಾರ್, ಪ್ರಕಾಶ್ ಇತರರಿದ್ದರು.