ಬೇಲೂರು: ತಾಲೂಕಿನ ಕೋಗಿಲಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡ್ಲಿಗೆರೆ ಸಮೀಪದ ನಿಂಗೇನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ತಿಂಗಳ ಹಿಂದೆ ನಿಂಗೇನಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ರಸ್ತೆ ಸೇರಿದಂತೆ ವಿವಿಧ ಬೇಡಿಕೆ ಇಟ್ಟಿದ್ದರು. ನಲ್ಲಿ ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಕೋರಿದ್ದರು. ಆದರೆ, ಗ್ರಾಮಸ್ಥರು ಓಡಾಡದಷ್ಟು ರಸ್ತೆ ಹಾಳಾಗಿರುವುದನ್ನು ಗಮನಿಸಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಅವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ 22 ಲಕ್ಷ ರೂ.ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಪ್ಪ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಶಾಸಕರಲ್ಲಿ ಮನವಿ ಮಾಡಿದಾಗ 22 ಲಕ್ಷ ರೂ.ಅನುದಾನ ನೀಡಿ ಭೂಮಿಪೂಜೆ ನೆರವೇರಿಸಿದ್ದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ಗ್ರಾಮಸ್ಥರಾದ ಮರಳಪ್ಪ, ಪುಟ್ಟೇಗೌಡ, ಪರಮೇಶ್, ಶಾಂತಕುಮಾರ್, ದಾಕ್ಷಾಯಿಣಿ, ಶಾಂತಮ್ಮ, ಕುಸುಮಾ, ಜಯಮ್ಮ, ಉಷಾ, ವನೀತಾ ಇತರರಿದ್ದರು.