ಹಾಸನ: ಹಾಸನಾಂಬೆ ಜಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ ಜಿಲ್ಲೆಯ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜನಜೀವನ ಪ್ರತಿಬಿಂಬಿಸುವ ನಾಡಹಬ್ಬದ ಸ್ವರೂಪದಲ್ಲಿ ಆಚರಿಸುವ ಚಿಂತನೆ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ಗಾನ ವೈಭವ ಹಾಗೂ ಸಾಧಕರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಸನಾಂಬೆ ದೇವಿಯ ಜಾತ್ರೆಗೆ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವಿದೆ. ಪ್ರತಿವರ್ಷ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ, ವೈಭವಯುತವಾಗಿ ಆಚರಿಸುವ ಮೂಲಕ ಹಾಸನದ ಕೀರ್ತಿಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದರು.
ಕಳೆದ ಬಾರಿ ಹಾಸನಾಂಬೆ ದೇವಿಯ ಬಾಗಿಲು ತೆರೆದ ಸಂದರ್ಭದಲ್ಲಿ ತಾಯಿ ನನಗೂ ಒಂದು ಅವಕಾಶ ಕೊಡು, ನಿನ್ನ ಸೇವೆ ಮಾಡಲು ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡು ಎಂದು ಪ್ರಾರ್ಥಿಸಿದ್ದೆ. ತಾಯಿಯ ಆಶೀರ್ವಾದದಿಂದ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಭಾವುಕರಾಗಿ ಸ್ಮರಿಸಿದರು.
ಈ ಬಾರಿಯ ಜಾತ್ರೆಯನ್ನು ಜಿಲ್ಲೆಯ ನಾಡಹಬ್ಬವನ್ನಾಗಿ ರೂಪಿಸುವ ಉದ್ದೇಶವಿದ್ದು, ಯಶಸ್ಸಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಕರೆ ನೀಡಿದರು.
ಕನ್ನಡಪರ ಸಂಘಟನೆ ಕಟ್ಟುವುದು ಸುಲಭವಲ್ಲ. ಟಿ.ಎ.ನಾರಾಯಣಗೌಡರು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಗೆ ಸ್ವಂತ ಕಟ್ಟಡ ನಿರ್ಮಿಸಿ ಕನ್ನಡ ನಾಡು-ನುಡಿ ರಕ್ಷಣೆಗೆ ಸಂಕಲ್ಪ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಂಭುನಾಥ ಸ್ವಾಮೀಜಿ, ಸರ್ವಧರ್ಮ ಸಮನ್ವಯ ಹಾಗೂ ಸಾಮಾಜಿಕ ನ್ಯಾಯದ ಅಗತ್ಯದ ಬಗ್ಗೆ ಹೇಳಿದರು. ಕಾರ್ಯಕ್ರಮದಲ್ಲಿ 12 ಸಾಧಕರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಎಚ್.ಪಿ.ಸ್ವರೂಪ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನ್‌ಗೌಡ, ಜೆ.ಆರ್.ಕೆಂಚೇಗೌಡ, ಕೆ.ಆರ್.ಲಕ್ಷ್ಮೀಕಾಂತ್, ಡಾ.ಅಬ್ದುಲ್ ಬಶೀರ್, ಸಿ.ಡಿ.ಮನುಕುಮಾರ್, ದೊಡ್ಡಮಗ್ಗೆ ರಾಜೇಂದ್ರ ಇತರರಿದ್ದರು.