ಆಲೂರು: ಶಿಕ್ಷಕರು ಮಕ್ಕಳ ವ್ಯಕ್ತಿತ್ವ, ಭವಿಷ್ಯ ರೂಪಿಸುವ ನಿರ್ಮಾಪಕರಾಗಿದ್ದು, ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಸಂಕಲಾಪುರ ಮಠದ ಕಿರಿಯ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಂಕಲಾಪುರ ಮಠದ ಜಾನ್ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಶಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ವಿಶಿಷ್ಟ ಕೊಡುಗೆ ಸ್ಮರಿಸಿದರು. ಸ್ವಾತಂತ್ರೃ ನಂತರ ದೇಶ ಬಲಿಷ್ಠವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆಯೂ ಶಿಕ್ಷಕರ ಪಾತ್ರವಿದೆ. ರಾಜ್ಯದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಇನ್ನಷ್ಟು ಹೆಚ್ಚಬೇಕಿದೆ. ಸಮಾನತೆಯ ಆಶಯ ಈಡೇರಲು ಮಹಿಳೆಯರು ಸುಶಿಕ್ಷಿತರಾಗುವುದು ಅನಿವಾರ್ಯ. ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳ ಭವಿಷ್ಯ, ಬದುಕಿನ ಬಗ್ಗೆ ಚಿಂತಿಸಬೇಕಿದೆ ಎಂದರು.
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷ ಸಿ.ಎಸ್.ಮಹೇಶ್ ಚಿಕ್ಕೋಟೆ ಮಾತನಾಡಿ, ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಮಹಾನ್ ಗುರುಗಳಾಗಿ ರೂಪುಗೊಳ್ಳಬೇಕು. ಶಿಕ್ಷಕರ ಪಾತ್ರ ಕೇವಲ ಪಾಠ ಬೋಧನೆಗೆ ಸೀಮಿತವಾಗಬಾರದು. ಬದಲಾಗುತ್ತಿರುವ ಕಾಲಮಾನ, ಶಿಕ್ಷಣ ವ್ಯವಸ್ಥೆ, ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ, ಬೋಧನಾ ಕೌಶಲವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಪರಮೇಶ್ ಮಡಬಲು ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ, ಬದುಕಿಗೆ ಸರಿಯಾದ ದಾರಿಯನ್ನು ತೋರಿಸುವ ಶಿಕ್ಷಕರು ನಮ್ಮ ಜೀವನದ ನಿಜವಾದ ಮಾರ್ಗದರ್ಶಕರು, ಶಿಲ್ಪಿಗಳು. ಒಬ್ಬ ವ್ಯಕ್ತಿಯನ್ನು ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ಶಿಕ್ಷಕರು ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದ್ದಾರೆ. ಶಿಕ್ಷಕರನ್ನು ಗೌರವಿಸಲು ಪ್ರತಿವರ್ಷ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಇಂತಹ ಕಾಯಕ ದೊರೆತದ್ದು ನಮ್ಮ ಸುಕೃತವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕ ಹರೀಶ್, ಕಾರ್ಯದರ್ಶಿ ಕೆ.ಆರ್.ಕಾಂತರಾಜು, ಆನಂದ್, ದಿಲೀಪ್, ಹೆಚ್.ಡಿ.ವಸಂತ ಕುಮಾರಿ, ದಿನೇಶ್, ಪಲ್ಲವಿ, ವಿನುತ, ಸಹನ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.