ಚನ್ನರಾಯಪಟ್ಟಣ: ದೇವರ ಇಚ್ಛೆಯಿದ್ದಲ್ಲಿ ಎಲ್ಲವೂ ಸಾಧ್ಯ. ಆತನ ಸಂಕಲ್ಪದಂತೆ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅನೇಕ ಕಾರ್ಯಗಳು ನೆರವೇರಿಹೋಗುತ್ತವೆ. ಆದರೆ ಅಂತಹ ದೈವಿಕ ಅನುಗ್ರಹವನ್ನು ಪಡೆಯಲು ಮನುಷ್ಯನಲ್ಲಿ ತಾಳ್ಮೆ, ನಂಬಿಕೆ, ಭಕ್ತಿ ಹಾಗೂ ಧಾರ್ಮಿಕ ಮನೋಭಾವನೆ ಇರಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಕಬ್ಬಳಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯ ಉದ್ಘಾಟಿಸಿದ ಬಳಿಕ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನ, ಅಧಿಕಾರ, ಸಂಪತ್ತು ಹಾಗೂ ಅಹಂಕಾರವಿದ್ದರೂ ದೇಗುಲ ಮತ್ತು ಮಠಗಳ ಪ್ರವೇಶದ್ವಾರದಲ್ಲಿ ಅವೆಲ್ಲವನ್ನೂ ಬದಿಗಿಟ್ಟು ವಿನಯದಿಂದ ನಡೆದುಕೊಳ್ಳಬೇಕು. ಏಕೆಂದರೆ ದೇವಾಲಯಗಳು ಮನುಷ್ಯನ ಅಹಂಕಾರವನ್ನು ಕರಗಿಸಿ ಭಕ್ತಿ, ಶ್ರದ್ಧೆ ಮತ್ತು ಆತ್ಮಶುದ್ಧಿಯ ಮಾರ್ಗವನ್ನು ತೋರಿಸುವ ಪವಿತ್ರ ತಾಣಗಳಾಗಿವೆ. ಬಾಹ್ಯ ಸ್ನಾನದಿಂದ ದೇಹದ ಮೇಲಿನ ಕೊಳೆ ನಿವಾರಣೆಯಾಗಬಹುದು. ಮನಸ್ಸಿನ ಕೊಳೆ ತೊಳೆಯಬೇಕಾದರೆ ಸನ್ಮಾರ್ಗದಲ್ಲಿ ನಡೆಯಬೇಕು. ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇವರ ಸೇವೆ ಮಾಡಬೇಕು. ನಿಷ್ಕಲ್ಮಶ ಭಕ್ತಿಯಿಂದ ಜೀವನ ನಡೆಸಿದಾಗ ಮಾತ್ರ ಭಗವಂತನ ಪಾದದಲ್ಲಿ ಮುಕ್ತಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಮನುಷ್ಯನ ಬದುಕಿನಲ್ಲಿ ಧರ್ಮ ಮತ್ತು ಭಕ್ತಿಗೆ ವಿಶೇಷ ಸ್ಥಾನವಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕೇವಲ ಕಟ್ಟಡಗಳ ನಿರ್ಮಾಣಕ್ಕೆ ಸೀಮಿತವಾಗದೆ, ಜನರಲ್ಲಿ ಸಂಸ್ಕಾರ, ಸದ್ಭಾವನೆ, ಸಾಮರಸ್ಯ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸುವಂತಿರಬೇಕು. ಕಬ್ಬಳಿ ಕ್ಷೇತ್ರದ ಅಭಿವೃದ್ಧಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಪುನರುತ್ಥಾನ ಈ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಕಲ್ಪದಂತೆ ಭಕ್ತರ ಸಹಕಾರದೊಂದಿಗೆ ಬಸವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಉದ್ಘಾಟನೆಗೊಂಡಿರುವುದು ಪುಣ್ಯದ ಕ್ಷಣವಾಗಿದೆ. ಇದೀಗ ಕಬ್ಬಳಿ ಕ್ಷೇತ್ರವು ಎರಡನೇ ಚುಂಚನಗಿರಿಯಂತೆ ಧಾರ್ಮಿಕ ವೈಭವದಿಂದ ಕಂಗೊಳಿಸುತ್ತಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ತಿಪಟೂರು, ತುರುವೇಕೆರೆ ಹಾಗೂ ಚನ್ನರಾಯಪಟ್ಟಣ ಮಾರ್ಗಗಳಿಂದ ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮಾಜಿ ಸಚಿವ ದಿ.ನಾಗೇಶ್ ಅವರ ಸಹಕಾರದಿಂದ ನಾಗಮಂಗಲ ನಾಲೆಯ ಹೊಂಗೇಲಕ್ಷ್ಮೀ ಕ್ಷೇತ್ರದ ಬಳಿಯಿಂದ ಪೈಪ್ಲೈನ್ ಮೂಲಕ ಕ್ಷೇತ್ರಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಿ, ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಕೈಂಕರ್ಯ
ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಬೆಳಗ್ಗೆ 5.30ಕ್ಕೆ ಮಂಗಳವಾದ್ಯ, ವೇದಪಾರಾಯಣ, ರುದ್ರಪಾರಾಯಣ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ಬಿಂಬಶುದ್ಧಿ, ಯೋಗಶಾಲಾ ಪೂಜೆ, ತತ್ವಾರ್ಚನೆ, ನಾಡಿಸಂಧಾನಪೂರ್ವಕ ಸ್ಪರ್ಶಾಹುತಿ, ಕಲಾಹೋಮ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ಮೂಲಮಂತ್ರ ಹೋಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಬೆಳಗ್ಗೆ 8.30ಕ್ಕೆ ದ್ರವ್ಯಾಹುತಿ, ಮಹಾಪೂರ್ಣಾಹುತಿ, ಯಾತ್ರಾದಾನಪೂರ್ವಕ ಕಳಶ ಉದ್ವಾಸನೆ ಹಾಗೂ ದೇವಾಲಯ ಪ್ರದಕ್ಷಿಣೆ ನಡೆದವು. ಬೆಳಗ್ಗೆ 9.15ರಿಂದ 10 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದ ಪವಿತ್ರ ಮುಹೂರ್ತದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬಸವೇಶ್ವರ ಸ್ವಾಮಿಗೆ ಮಹಾಕುಂಭಾಭಿಷೇಕ, ಫಲಪಂಚಾಮೃತಾಭಿಷೇಕ, ಅಲಂಕಾರ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ, ಕೂಷ್ಮಾಂಡಕದಳಿ ಛೇದನ, ಧಾನ್ಯ, ಧೇನು, ದರ್ಪಣ, ದರ್ಶನ, ಬಲಿಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿದವು.
‘ದಿವ್ಯ ಸಂಕಲ್ಪದಿಂದ ಸಾಕಾರದೆಡೆಗೆ ಶ್ರೀ ಕಬ್ಬಳಿ ಬಸವೇಶ್ವರ ಸನ್ನಿಧಿಯಲ್ಲಿ ಗುರು ಕೃಪೆಯ ಹೆಜ್ಜೆಗಳು’ ಪುಸ್ತಕವನ್ನು ಶ್ರೀಗಳು, ಗಣ್ಯರು ಬಿಡುಗಡೆ ಮಾಡಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಪುಷ್ಪವೃಷ್ಟಿಯೊಂದಿಗೆ ಭಕ್ತರು ಸ್ವಾಗತಿಸಿದರು. ಶ್ರೀ ಬಸವೇಶ್ವರ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಆದಿಚುಂಚನಗಿರಿ ಹಾಸನ-ಕೊಡಗು ಶಾಖೆಯ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಶಾಖಾ ಮಠದ ಶ್ರೀ ಶಿವಲಿಂಗನಾಥ ಸ್ವಾಮೀಜಿ, ಮಂಡ್ಯ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಕೈಲಾಸಪತಿ ಸ್ವಾಮೀಜಿ, ಹಳೇಬೀಡಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಸಾಯಿ ಮಂದಿರದ ಶ್ರೀ ಗುರುಮೂರ್ತಿ ಗುರೂಜಿ, ಶ್ರೀ ಯೋಗಾನಂದ ಗುರೂಜಿ, ಸಂಸದ ಶ್ರೇಯಸ್ ಎಂ.ಪಟೇಲ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಶಾಸಕ ಎ. ಮಂಜು, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎನ್. ಮುದ್ದೇಗೌಡ, ಖಜಾಂಚಿ ರಘು ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ಗುಡಿಗೌಡ ಪ್ರಕಾಶ್, ಜವರೇಗೌಡ, ಗಣೇಶ್ ಗೌಡ, ಎನ್.ಆರ್.ರತ್ನರಾಜ್, ಶಿವನಂಜೇಗೌಡ, ಗ್ರಾಮಸ್ಥರು ಉಪಸ್ಥಿತರಿದ್ದರು.