ಅರಸೀಕೆರೆ: ದೇಶದ ದಾಸ್ಯ ವಿಮೋಚನೆಗೆ ಶ್ರಮಿಸಿದ ಮಹನೀಯರ ಸ್ಮರಣೆ ಔಚಿತ್ಯ ಹಾಗೂ ಅರ್ಥಪೂರ್ಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ನಗರಕ್ಕೆ ಹೊಂದಿಕೊಂಡಂತಿರುವ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಸತ್ಯ, ಅಹಿಂಸೆ ಮಾರ್ಗದಲ್ಲಿ ಮಹಾತ್ಮ ಗಾಂಧೀಜಿ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟರು. ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ರೈತರು, ಸೈನಿಕರ ಪರವಾಗಿ ಕೆಲಸ ಮಾಡುವ ಮೂಲಕ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಬ್ಬರು ನಾಯಕರ ತತ್ವ, ಚಿಂತನೆ, ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ ಎಂದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಪಠ್ಯಕ್ರಮದ ಭಾಗವಾಗಬೇಕು. ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಸದ್ಗುಣ, ಪರಂಪರೆ ನಶಿಸಿ ಹೋಗುವ ಅಪಾಯವಿದೆ. ಸತ್ಯಹರಿಶ್ಚಂದ್ರ, ಶ್ರವಣಕುಮಾರ ಮೊದಲಾದ ಕತೆ, ನಾಟಕಗಳು ಮಹಾತ್ಮ ಗಾಂಧೀಜಿ ಅವರ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿವೆ. ಹಾಗಾಗಿ ಮೌಲ್ಯಗಳಿಗೆ ಮೊದಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಬಿಇಒ ಮೋಹನ್ ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಆರ್.ಅನಂತ ಕುಮಾರ್ ,ಪ್ರಭಾರ ಸಿಡಿಪಿಒ ಯೋಗೀಶ್, ಸದಾನಂದಮೂರ್ತಿ ಹಾಜರಿದ್ದರು.