ಅರಕಲಗೂಡು: ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ ಎಂದು ಹಾಸನ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮೀ ಹೇಳಿದರು.
ತಾಲೂಕಿನ ಹಂಡ್ರಂಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಹಾಗೂ ಶ್ರೀ ವಿನಾಯಕ ಸ್ನೇಹ ಬಳಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳ ಜೀವ ಉಳಿಸಲು ಸ್ವಯಂ ಪ್ರೇರಿತ ರಕ್ತದಾನ ಅತ್ಯಂತ ಮಹತ್ವದ್ದಾಗಿದೆ ಎಂದರು.
ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ರಂಗಸ್ವಾಮಿ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನವು ಮಾನವೀಯ ಸೇವೆಯ ಪ್ರಮುಖ ಕಾರ್ಯವಾಗಿದ್ದು, ಆರೋಗ್ಯವಂತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ನೆರವಾಗಬೇಕು ಎಂದು ಹೇಳಿದರು.
ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ಎನ್‌ಸಿಡಿ, ಐಸಿಟಿಸಿ ವಿಭಾಗದ ಸಿಬ್ಬಂದಿ ಹಾಗೂ ಹಂಡ್ರಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಬಿರದಲ್ಲಿ ಸಹಕರಿಸಿದರು. ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ ಶಿರೂರ ಅವರು ಮೊಬಿಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಭಿತ್ತಿಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಚ್‌ಐವಿ ಕುರಿತ ಅರಿವು ಹಾಗೂ ತಮ್ಮ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಪಂ ಪಿಡಿಒ ರಾಜಶೇಖರ್, ಮಾಜಿ ಅಧ್ಯಕ್ಷ ಶಿವಕುಮಾರ್, ಎಆರ್‌ಎಸ್ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್, ಸದಸ್ಯೆ ವೀಣಾ, ಹಾಸನ ರಕ್ತನಿಧಿ ಕೇಂದ್ರದ ಅಶ್ವತ್, ಸುಭಾಷ್, ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ ಶಿರೂರ, ಆನಂದಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್, ಕ್ಷಯರೋಗ ಮೇಲ್ವಿಚಾರಕ ಸುಬ್ರಮಣ್ಯ, ಪ್ರಕಾಶ್, ಮಲ್ಲಿಕಾರ್ಜುನ, ಪ್ರಕಾಶ್ ಇತರರಿದ್ದರು.
ಶಿಬಿರದಲ್ಲಿ 35ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.