ಅರಸೀಕೆರೆ: ಜನರ ಆರೋಗ್ಯ ಸುರಕ್ಷತೆಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆವರಣದಲ್ಲಿ ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ಬಹುಕಾಲದ ಸಮಸ್ಯೆಯಾಗಿದ್ದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಸಮರ್ಪಕವಾಗಿ ಹೊರಹಾಕುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಒಂದು ಐಸಿಯು ಹಾಗೂ ಐದು ವಿಶೇಷ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ವಾರದೊಳಗೆ ಸೇವೆಗೆ ಸಮರ್ಪಿಸಲು ಚಿಂತನೆ ನಡೆದಿದ್ದು, ಉದ್ಘಾಟನೆಗೆ ಆರೋಗ್ಯ ಸಚಿವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ವಾರದೊಳಗೆ ಸಿಟಿ ಸ್ಕ್ಯಾನ್ ಯಂತ್ರ ಅಳವಡಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ನಡೆಯುತ್ತಿರುವ ಸೇವಾ ಸ್ಪರ್ಧೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಅಗತ್ಯವಿದೆ. ಆಸ್ಪತ್ರೆಯಲ್ಲಿ ಉತ್ತಮ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ವೈದ್ಯರು ಗುಣಮಟ್ಟದ ಸೇವೆ ನೀಡಿದಾಗ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳತ್ತ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ಮುಖ್ಯವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಜೆ 5 ಗಂಟೆಯ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸದೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ವ್ಯವಸ್ಥೆ ಸರಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸಮಯದಲ್ಲಾದರೂ ರೋಗಿಗಳು ಬರುತ್ತಾರೆ. ಕಾಯಿಲೆಗಳು ಸಮಯ ನೋಡಿಕೊಂಡು ಬರುವುದಿಲ್ಲ. ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಲಾಗಿದ್ದು ಸಂಜೆ 5 ಗಂಟೆಯ ನಂತರವೂ ಕನಿಷ್ಠ ಮೂವರು ಅಥವಾ ನಾಲ್ವರು ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿತ್ತು. ವೈದ್ಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಅದೇ ರೀತಿ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯೂ ಕನಿಷ್ಠ ಮೂವರು-ನಾಲ್ವರು ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಲಭ್ಯವಿರುವ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ತಹಸೀಲ್ದಾರ್ ಸಂತೋಷ್ ಕುಮಾರ್, ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಸಮೀವುಲ್ಲ, ಹೇಮಂತ್, ಗುತ್ತಿಗೆದಾರರಾದ ಬಸವರಾಜು, ಕೃಷ್ಣ, ಗಿರೀಶ್, ಜಯರಾಂ, ರೇವಣ್ಣ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.
ಚಕಮಕಿ: ಭೂಮಿ ಪೂಜೆ ಮಕ್ತಾಯಗೊಂಡ ಬಳಿಕ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ವೇಳೆ ವಕೀಲ ಕೆಂಪುಸಾಗರ ಶಿವರಾಜ್ ಕುಮಾರ್ ಆಸ್ಪತ್ರೆ ಅವ್ಯವಸ್ಥೆ ಕುರಿತು ಪ್ರಶ್ನಿಸಿದರು. ಇದರಿಂದ ವಿಚಲಿತರಾದ ಸಚಿವ ಕೆ.ಎಂ.ಶಿವಲಿಂಗೇಗೌಡ ಕೆಲವರು ಬೇಕೆಂದು ಇನ್ನಿಲ್ಲದ ವಿಷಯ ಪ್ರಸ್ತಾಪ ಮಾಡಿ ಸಭೆಯ ಔಚಿತ್ಯ ಹಾಳು ಮಾಡುತ್ತಿದ್ದು ಹೊರಗೆ ಕಳುಹಿಸಿ ಎಂದರು. ಇದರಿಂದ ಸಚಿವರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.