ಹಾಸನ

ಜ.17ರಂದು ಅಂತಾರಾಷ್ಟ್ರೀಯಮಟ್ಟದ ಮ್ಯಾರಥಾನ್

ತಾಲೂಕಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ (ಬ್ರಾೃಂಡ್) ದೊರಕಿಸಿಕೊಡುವ ಅಂಗವಾಗಿ

ಸಕಲೇಶಪುರ: ತಾಲೂಕಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ (ಬ್ರಾೃಂಡ್) ದೊರಕಿಸಿಕೊಡುವ ಅಂಗವಾಗಿ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

ಡ್ರಗ್ಸ್‌ಮುಕ್ತ ಸಕಲೇಶಪುರ ಸಂಘಟನೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಹಾಗೂ ಲಯನ್ಸ್ ಸಂಸ್ಥೆ ಸೇರಿದಂತೆ ಪಟ್ಟಣದ ಪ್ರಮುಖ ಸಕ್ರಿಯ ಸಂಘಟನೆಗಳು ಅಂತಾರಾಷ್ಟ್ರೀಯ ಮ್ಯಾರಥಾನ್ ನಡೆಸಲು ಸಿದ್ಧತೆ ನಡೆಸಿದ್ದು. ಜ.17ರಂದು ಪಟ್ಟಣದಲ್ಲಿ ಅಂತಾರಾಷ್ಟ್ರೀಯಮಟ್ಟದ ಮ್ಯಾರಥಾನ ಆಯೋಜಿಸಲಾಗಿದೆ.

42 ಕಿ.ಮೀ. ದೂರದ ಪೂರ್ಣ ಮ್ಯಾರಥಾನ್, 21 ಕಿ.ಮೀ. ದೂರದ ಅರ್ಧ ಮ್ಯಾರಥಾನ್, 10 ಕಿ.ಮೀ ಹಾಗೂ ಐದು ಕಿ.ಮೀ. ದೂರದ ಮ್ಯಾರಥಾನ್ ನಡೆಸಲು ಉದ್ದೇಶಿಸಲಾಗಿದ್ದು ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಊರ ಹಬ್ಬ: ಜ.17ರಂದು ಮುಂಜಾನೆ 5.30 ರಿಂದ 9.30 ರವರೆಗೆ ನಡೆಯಲಿರುವ ಮ್ಯಾರಥಾನ್ ನಂತರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಊರ ಹಬ್ಬ ಹಮ್ಮಿಕೊಳ್ಳಲಾಗಿದೆ. ಊರ ಹಬ್ಬದಲ್ಲಿ ಮಲೆನಾಡ ತಿಂಡಿ-ತಿನಿಸು ಮಾರಾಟ, ಪ್ರದರ್ಶನ, ಪುರಾತನ ವಸ್ತುಗಳ ಪ್ರದರ್ಶನ, ಸ್ಥಳೀಯ ಉಡುಗೆ-ತೊಡುಗೆ ಪ್ರದರ್ಶನ, ಮಲೆನಾಡು ಸುಗ್ಗಿ ಕುಣಿತ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಸೇರಿದಂತೆ ರಾಜ್ಯಮಟ್ಟದ ಸಂಗೀತ ದಿಗ್ಗಜರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಲ್ಲದೆ ಡ್ರಗ್ಸ್ ವಿಚಾರವಾಗಿ ನಾಟಕ ಪ್ರದರ್ಶನ ಸಹ ಸ್ಥಳೀಯ ಕಲಾವಿದರಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.