ಆಲೂರು: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಆಹಾರ ಪ್ರಿಯರಿಗೆ ಗುಣಮಟ್ಟದ ಆಹಾರ ಪದಾರ್ಥಗಳು ಒಂದೇ ಸ್ಥಳದಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ ನೂತನ ಫುಡ್ ಕೋರ್ಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಅನುದಾನದಡಿ ಆಲೂರು ಪಟ್ಟಣದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಫುಡ್ ಕೋರ್ಟ್ (ಆಹಾರ ಮಳಿಗೆ) ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನೂತನ ಫುಡ್ ಕೋರ್ಟ್ ನಿರ್ಮಾಣದಿಂದ ಸ್ಥಳೀಯ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಬೀದಿಬದಿ ವ್ಯಾಪಾರಿಗಳು ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡುವುದರ ಜತೆಗೆ ಆಹಾರ ಪದಾರ್ಥಗಳು ಒಂದೇ ಸೂರಿನಡಿ ಸಿಗುವಂತೆ ಕ್ರಮ ವಹಿಸಬೇಕು ಎಂದರು. ಕೇವಲ ಫುಡ್ ಕೋರ್ಟ್ ಮಾತ್ರವಲ್ಲದೆ, ಆಲೂರು-ಸಕಲೇಶಪುರ ಕ್ಷೇತ್ರದಾದ್ಯಂತ ರಸ್ತೆ, ಕುಡಿಯುವ ನೀರು ಮತ್ತು ಇಂತಹ ಹಲವು ಜನಪರ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಹಂತ ಹಂತವಾಗಿ ಗುಣಮಟ್ಟದಿಂದ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಮಾಜಿ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಪ್ರಕಾಶ್, ಸ್ಥಳೀಯ ಮುಖಂಡರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.