ಚನ್ನರಾಯಪಟ್ಟಣ: ಶೈಕ್ಷಣಿಕ ಸಾಧನೆಯೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿರುವ ಪಟ್ಟಣದ ನವೋದಯ ವಿದ್ಯಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ನವೋದಯ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದಲ್ಲೂ ಕ್ರೀಡಾ ಸಾಮರ್ಥ್ಯ ಅನಾವರಣಗೊಳಿಸಿದೆ.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನವೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ನವೋದಯ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಹಲವು ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದರು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನವೋದಯ ಸಂಸ್ಥೆ ಸತತ 25 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದೀಗ ಸಂಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿ ಲಭಿಸಿರುವುದು ನವೋದಯ ಕುಟುಂಬದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ.
ಈ ಸಾಧನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿದ್ಯಾರ್ಥಿಗಳ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹವೇ ಸಾಧನೆಗೆ ಕಾರಣವಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಪಟ್ಟಣದ ನವೋದಯ ವಿದ್ಯಾಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಪೂಮಾಡಿಹಳ್ಳಿ ಜಗದೀಶ್, ದೇಶದಲ್ಲಿಯೇ ನವೋದಯ ಸಂಸ್ಥೆ ತನ್ನದೇ ಆದ ಹೆಗ್ಗಳಿಕೆ ಹೊಂದಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ವಿದ್ಯಾರ್ಥಿಗಳ ಪುಣ್ಯ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗೆ ಸೀಮಿತರಾಗದೆ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸುವ ಮೂಲಕ ಸಂಸ್ಥೆ ಹಾಗೂ ಪಾಲಕರಿಗೆ ಹೆಮ್ಮೆ ತರುವ ವಿಷಯ ಎಂದು ಶ್ಲಾಘಿಸಿದರು.
ನವೋದಯ ವಿದ್ಯಾ ಸಂಘದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನವೋದಯ ಸಂಸ್ಥೆ ಸತತ 25 ವರ್ಷಗಳಿಂದ ಸಮಗ್ರ ಪ್ರಶಸ್ತಿ ಪಡೆಯುತ್ತಿದ್ದು, ಇದೀಗ ಸಂಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ನವೋದಯ ವಿದ್ಯಾ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಜೆ.ಮಂಜುನಾಥ್ ಮಾತನಾಡಿ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಹಲವು ಸವಾಲುಗಳ ನಡುವೆಯೂ ಶ್ರಮಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶ, ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಸಂಸ್ಥೆಯಿಂದ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಲೇಂದ್ರ, ಖಜಾಂಚಿ ಮರವನಹಳ್ಳಿ ಸಂತೋಷ್, ನಿರ್ದೇಶಕ ಜೆ.ಕೆ.ರಾಘವೇಂದ್ರ, ಕಾಲೇಜಿನ ಪ್ರಾಂಶುಪಾಲ ಎ.ಟಿ.ಸಂಜಯ್ ಕುಮಾರ್, ಸುಮಲತಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್, ಸೇರಿದಂತೆ ಉಪನ್ಯಾಸಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.