ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಕಾೃನಿಂಗ್, ಡಿಫಿಬ್ರಿಲೇಟರ್ ಘಟಕವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಕಿಶೋರ್, ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್, ತಜ್ಞ ವೈದ್ಯರಾದ ಡಾ. ನಿಶ್ಚಿತ, ಡಾ. ವೆಂಕಟೇಶ್, ಡಾ. ಹೇಮಂತ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 
ಹಾಸನ

ಕ್ರಾಫರ್ಡ್ ಆಸ್ಪತ್ರೆಯಲ್ಲಿ ಡಿಫಿಬ್ರಿಲೇಟರ್ ಘಟಕ ಶುರು

ಶಾಸಕ ಸಿಮೆಂಟ್ ಮಂಜು ಉದ್ಘಾಟನೆ

ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ದುರಸ್ತಿಗೊಂಡ ಸ್ಕಾೃನಿಂಗ್ ಯಂತ್ರ ಹಾಗೂ ಹೃದಯಾಘಾತದ ತುರ್ತು ಸಂದರ್ಭಗಳಲ್ಲಿ ಬಳಸುವ ಡಿಫಿಬ್ರಿಲೇಟರ್ ಘಟಕವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಹಲವು ವರ್ಷಗಳಿಂದ ಸ್ಕಾೃನಿಂಗ್ ಯಂತ್ರ ಬಳಕೆಗೆ ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ರೇಡಿಯಾಲಜಿಸ್ಟ್ ನೇಮಕ ಹಾಗೂ ಯಂತ್ರದ ದುರಸ್ತಿ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಯಂತ್ರದ ದುರಸ್ತಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ ಎಂದರು.

ಐದನೇ ತಿಂಗಳ ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಅಗತ್ಯವಿರುವ ಸುಧಾರಿತ ತಂತ್ರಜ್ಞಾನದ ಸೌಲಭ್ಯವಿಲ್ಲದ ಕಾರಣ, ಸದ್ಯ ಹೊರಗಡೆ ಮಾಡಿಸಲಾಗುತ್ತಿದ್ದು, ಅದರ ವೆಚ್ಚವನ್ನು ಆಸ್ಪತ್ರೆ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲೇ ಒದಗಿಸಲಾಗುವುದು ಎಂದು ಹೇಳಿದರು.

ಹೃದಯಾಘಾತ ಅಥವಾ ಎದೆನೋವಿನ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಡಿಫಿಬ್ರಿಲೇಟರ್ ಉಪಕರಣ ಅಳವಡಿಸಲಾಗಿದೆ. ಹೃದಯ ಬಡಿತ ಸ್ಥಗಿತಗೊಂಡಂತಹ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಶಾಕ್ ಮೂಲಕ ಹೃದಯದ ಬಡಿತವನ್ನು ಪುನಃ ಪ್ರಾರಂಭಿಸಲು ಈ ಉಪಕರಣ ನೆರವಾಗಲಿದೆ ಎಂದರು.

ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸುಮಾರು 600ರಿಂದ 800 ರೋಗಿಗಳು ಚಿಕಿತ್ಸೆಗೆ ಆಗಮಿಸುವ ಸಂದರ್ಭಗಳಿವೆ. ಇದಕ್ಕೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಇತರೆ ಸೌಲಭ್ಯಗಳನ್ನು ಹಂತ ಹಂತವಾಗಿ ಹೆಚ್ಚಿಸುವ ಅಗತ್ಯವಿದ್ದು, ಈ ಕುರಿತು ಆರೋಗ್ಯ ಸಚಿವರಿಗೂ ಮನವಿ ಮಾಡಲಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಕಿಶೋರ್, ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್, ತಜ್ಞ ವೈದ್ಯರಾದ ಡಾ. ನಿಶ್ಚಿತ, ಡಾ. ವೆಂಕಟೇಶ್, ಡಾ. ಹೇಮಂತ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.