ಅರಸೀಕೆರೆ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಡಾ.ಸುಧಾಮ್ ಬಾಗ್ ಬೆಳೆ ಹಾನಿ ವೀಕ್ಷಿಸಿದರು. ಕೆ.ಎಂ.ಶಿವಲಿಂಗೇಗೌಡ, ಲತಾ ಕುಮಾರಿ, ಶುಭಂ ಶುಕ್ಲ, ಶುಭಾನ್ವಿತ, ಸಂತೋಷ್ ಕುಮಾರ್ ಇತರರಿದ್ದರು. 
ಹಾಸನ

ಕೇಂದ್ರ ತಂಡಕ್ಕೆ ಭೀಕರ ಬರ ದರ್ಶನ

ಅರಸೀಕೆರೆ ತಾಲೂಕಿನ ವಿವಿಧೆಡೆ ಪರಿಶೀಲನೆ

ಅರಸೀಕೆರೆ: ಎತ್ತ ನೋಡಿದರತ್ತ ಖಾಲಿ ಜಮೀನು, ಬತ್ತಿದ ಕೆರೆಗಳು, ಬಿಸಿಲಿನ ತೀವ್ರತೆ, ಬಿಸಿಗಾಳಿ, ಮೇವಿನ ಹಾಹಾಕಾರ, ಪರಿಹಾರಕ್ಕೆ ಚಾತಕ ಪಕ್ಷಿಗಳಂತೆ ಕಾದು ಸೊರಗಿದ ಅನ್ನದಾತರ ಮುಖಗಳು...

ನವದೆಹಲಿಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಡಿಸಿ ಡಾ.ಸುಧಾಮ್ ಬಾಗ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ತಾಲೂಕಿನ ಕಸಬಾ, ಬಾಣಾವರ ಹಾಗೂ ಕಣಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಪ್ರವಾಸ ಮಾಡಿ ಪರಿಸ್ಥಿತಿ ಗಂಭೀರತೆ ಪರಿಶೀಲನೆ ನಡೆಸಿದ ವೇಳೆ ಕಂಡು ಬಂದ ಸನ್ನಿವೇಶ.

ಮೊದಲು ತಾಲೂಕಿನ ಕಸಬಾ ಹೋಬಳಿ ಬೋರನಕೊಪ್ಪಲು ಗ್ರಾಮದಲ್ಲಿರುವ ಗೋ ಶಾಲೆಗೆ ಭೇಟಿ ನೀಡಿದ ತಂಡ ಜಾನುವಾರು ಮೇವು, ಕುಡಿಯುವ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆಯಿತು. ಬಳಿಕ ಬಾಣಾವರ ಹೋಬಳಿ ಶ್ಯಾನೆಗರೆ ಗ್ರಾಮದ ಚಿಕ್ಕಕೆರೆ ವಸ್ತುಸ್ಥಿತಿ ಅವಲೋಕಿಸಿತು. ಗಂಜಿಗೆರೆ, ಅರಿವು ಹಳ್ಳಿ ಮೊದಲಾದ ಊರುಗಳ ಜಮೀನಿನಲ್ಲಿ ಬಿತ್ತನೆಯಾಗಿದ್ದ ರಾಗಿ ಪೈರು ಮಳೆ ಕೊರತೆಯಿಂದ ಬಾಡಿದ್ದನ್ನು ಪರಿಶೀಲಿಸಿದ ತಂಡ ಕಣಕಟ್ಟೆ ಹೋಬಳಿ ಶಂಕರನಹಳ್ಳಿ, ಅಗ್ಗುಂದ ಮೊದಲಾದ ಕೆರೆಗಳನ್ನು ವೀಕ್ಷಿಸಿ ರೈತರಿಂದ ಅಹವಾಲು ಸ್ವೀಕರಿಸಿತು.

ಮೇವು ಒದಗಿಸಿ ಪುಣ್ಯ ಕಟ್ಟಿಕೊಳ್ಳಿ: ಗಂಜಿಗೆರೆ ಹಾಗೂ ಅರೇಹಳ್ಳಿ ಸುತ್ತ ಮುತ್ತಲಿನ ಜಮೀನಿಗೆ ಅಧಿಕಾರಿಗಳ ತಂಡ ಬಂದ ಕೂಡಲೇ ಗಂಜಿಗೆರೆ ಚಂದ್ರಶೇಖರ್, ಗಿರಿಯೋಜಿಕೊಪ್ಪಲು ವಿಜಯ್ ಕುಮಾರ್, ಶ್ಯಾನೆಗರೆ ಬಾಬು, ಮಂಜು, ಅರೇಹಳ್ಳಿ ಜಯಪ್ಪ, ಈಶ್ವರಪ್ಪ ಮೊದಲಾದ ಮುಖಂಡರು ಹಾಗೂ ರೈತರು ಪರಿಹಾರ ಬೇಡ. ಬದಲಿಗೆ ಕುಡಿಯುವ ನೀರು ಮತ್ತು ಮೇವು ಪೂರೈಕೆ ಮಾಡುವಂತೆ ಅವಲವತ್ತುಕೊಂಡರು. ಹಣ ಖರ್ಚಾಗುತ್ತದೆ. ಆದರೆ, ಜಾನುವಾರು ರಕ್ಷಣೆ ಸವಾಲಿನ ಕೆಲಸವಾಗಿದ್ದು ಇನ್ನೊಂದು ವರ್ಷಕ್ಕೆ ಬೇಕಾಗುವ ಮೇವು ಒದಗಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು. ಡಾ.ಸುಧಾಮ್ ಬಾಗ್ ಎಲ್ಲವನ್ನೂ ಸಮಾಧಾನದಿಂದ ಆಲಿಸಿ ತೆರಳಿದರು.

ಕೈ ಮುಗಿದು ಮನವಿ: ಹಿಂದೆಂದೂ ಕಾಣದ ಬರದ ಭೀಕರತೆ ರಾಜ್ಯಕ್ಕೆ ಎದುರಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು ಬಿತ್ತನೆ ಸಾಧ್ಯವಾಗಿಲ್ಲ. ಸದ್ಯ ಜೀವನ ನಡೆಸುವುದೇ ದುಸ್ತರವಾಗಿದೆ. ಕೆರೆಗಳು ಬತ್ತಿದ್ದು, ಅಂತರ್ಜಲ ಕುಸಿತವಾಗಿದೆ. ತಾಲೂಕಿನ ಇತಿಹಾಸದಲ್ಲಿ ಖಾಲಿ ಜಮೀನಿನ ದರ್ಶನವಾಗಿಲ್ಲ. ಪ್ರಸಕ್ತ ಸನ್ನಿವೇಶ ಅನ್ನದಾತರ ಬದುಕಿಗೆ ಸಂಚಕಾರ ತಂದಿಟ್ಟಿದೆ. ಪರಿಶೀಲನೆಗೆ ಆಗಮಿಸಿರುವ ತಂಡ ನೈಜ ವರದಿ ಕೊಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಡಾ.ಸುಧಾಮ್ ಬಾಗ್ ಅವರ ಮುಂದೆ ಕೈ ಮುಗಿದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಪಂ ಸಿಇಒ ಶುಭಂ ಶುಕ್ಲ, ಎಸ್ಪಿ ಶುಭಾನ್ವಿತ, ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್, ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ , ಎ.ಪಿ.ಶಿವಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಬರ ಅಧ್ಯಯನ ತಂಡಕ್ಕೆ ಸಾಥ್ ನೀಡಿದರು.