ಅರಕಲಗೂಡು ತಾಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ಸಮಗ್ರ ಕೀಟ ನಿರ್ವಹಣೆ ರೈತ ಕ್ಷೇತ್ರ ಪಾಠಶಾಲೆ ನಡೆಯಿತು. ಎ.ಎಸ್. ಪ್ರವೀಣ್, ಶಾಂತ ಪ್ರಸಾದ್ ಅರಸು, ನಾಗೇಂದ್ರ ಪ್ರಸಾದ್, ಸುರೇಶ್ ಅರಸ್, ವಿಶ್ವನಾಥ್, ಶಶಿ, ದಿನೇಶ್, ಧರ್ಮ ಎಂ.ಜಿ., ಪ್ರಕಾಶ್, ಹೊನ್ನಪ್ಪ ಇತರರಿದ್ದರು. 
ಹಾಸನ

ಕೀಟಬಾಧೆ ವೈಜ್ಞಾನಿಕವಾಗಿ ನಿಯಂತ್ರಿಸಿ

ರೈತರಿಗೆ ಸಸ್ಯ ಸಂರಕ್ಷಣಾಧಿಕಾರಿ ಎ.ಎಸ್. ಪ್ರವೀಣ್ ಸಲಹೆ

ಅರಕಲಗೂಡು: ಭತ್ತದ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸುವುದರ ಜತೆಗೆ ರಾಸಾಯನಿಕ ಕೀಟನಾಶಕಗಳ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರು ಪ್ರಾದೇಶಿಕ ಕೇಂದ್ರಿಯ ಸಮಗ್ರ ಸಸ್ಯ ಪೀಡೆ ನಿರ್ವಹಣಾ ಕೇಂದ್ರದ ಸಹಾಯಕ ಸಸ್ಯ ಸಂರಕ್ಷಣಾಧಿಕಾರಿ ಎ.ಎಸ್. ಪ್ರವೀಣ್ ತಿಳಿಸಿದರು.

ತಾಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಗ್ರ ಕೀಟ ನಿರ್ವಹಣೆ ರೈತ ಕ್ಷೇತ್ರ ಪಾಠಶಾಲೆಯ ಸಮಾರೋಪ ಹಾಗೂ ರೈತರಿಗೆ ಕೀಟ ನಿರ್ವಹಣಾ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭತ್ತದ ಬೆಳೆಯ ವಿವಿಧ ಹಂತಗಳಲ್ಲಿ ಕಂಡುಬರುವ ಕೀಟ ಮತ್ತು ರೋಗಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಂಡರೆ ಬೆಳೆ ನಷ್ಟವನ್ನು ತಡೆಗಟ್ಟಬಹುದು. ರೈತರು ಕೀಟನಾಶಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಜೈವಿಕ ಹಾಗೂ ಯಾಂತ್ರಿಕ ನಿಯಂತ್ರಣ ವಿಧಾನಗಳಿಗೆ ಆದ್ಯತೆ ನೀಡಬೇಕು ಎಂದರು.

ಹೊಲದಲ್ಲಿರುವ ಜೇಡಗಳು, ಪರಾವಲಂಬಿ ಕೀಟಗಳು ಸೇರಿದಂತೆ ಉಪಕಾರಿ ಜೀವಿಗಳನ್ನು ಸಂರಕ್ಷಿಸುವ ಮೂಲಕ ನೈಸರ್ಗಿಕವಾಗಿ ಕೀಟಗಳ ಹಾವಳಿ ನಿಯಂತ್ರಿಸಬಹುದು ಎಂದು ತಿಳಿಸಿದರು.

ಕಾಂಡ ಕೊರಕ, ಹಸಿರು ಎಲೆ ಸುರುಳಿ ಹುಳು, ಕಂದು ಜಿಗಿಹುಳು ಸೇರಿದಂತೆ ಪ್ರಮುಖ ಕೀಟಗಳ ಗುರುತಿಸುವಿಕೆ, ಅವುಗಳ ಹಾನಿಯ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ. ಅಂಗಮಾರಿ, ಕಂದು ಮಚ್ಚೆ ಹಾಗೂ ಬೆಂಕಿ ರೋಗ ಸೇರಿದಂತೆ ಭತ್ತದ ಪ್ರಮುಖ ರೋಗಗಳ ನಿರ್ವಹಣೆಯ ಬಗ್ಗೆಯೂ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

ಹಳದಿ ಮತ್ತು ನೀಲಿ ಅಂಟು ಬಲೆ, ಬೆಳಕಿನ ಬಲೆ, ಫೆರೋಮೋನ್ ಬಲೆಗಳ ಬಳಕೆ, ಬೇವಿನಾಧಾರಿತ ಕೀಟನಾಶಕಗಳು ಹಾಗೂ ಜೈವಿಕ ನಿಯಂತ್ರಣ ವಿಧಾನಗಳು ಹಾಗೂ ಕೀಟನಾಶಕಗಳ ಸುರಕ್ಷಿತ ಬಳಕೆ, ಶಿಫಾರಸು ಮಾಡಿದ ಪ್ರಮಾಣ, ಸಿಂಪಡಣೆ ವಿಧಾನ, ಕೊಯ್ಲಿಗೆ ಮುನ್ನ ಕಾಯುವ ಅವಧಿ ಮತ್ತು ವೈಯಕ್ತಿಕ ಸುರಕ್ಷತಾ ಸಾಧನಗಳ ಬಳಕೆಯ ಬಗ್ಗೆಯೂ ತರಬೇತಿ ನೀಡಲಾಗಿದೆ. ರೈತರಿಗೆ ಕೀಟಗಳ ಮಿತ್ರ ಮತ್ತು ಶತ್ರುಗಳನ್ನು ಗುರುತಿಸುವುದರೊಂದಿಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ತರಬೇತಿ ಅವಧಿಯಲ್ಲಿ ರೈತರಿಗೆ ಭತ್ತದ ಬೆಳೆಯ ವಿವಿಧ ಬೆಳವಣಿಗೆಯ ಹಂತಗಳಲ್ಲಿ ಕ್ಷೇತ್ರ ವೀಕ್ಷಣೆ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಯಿತು. ರೈತರಿಗೆ ಸಮಗ್ರ ಕೀಟ ನಿರ್ವಹಣಾ ಪದ್ಧತಿಗಳನ್ನು ತಮ್ಮ ಹೊಲಗಳಲ್ಲಿ ಅನುಸರಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಿಟ್‌ಗಳನ್ನು ವಿತರಿಸಲಾಯಿತು.

ರೈತರಾದ ಶಾಂತ ಪ್ರಸಾದ್ ಅರಸು, ನಾಗೇಂದ್ರ ಪ್ರಸಾದ್, ಸುರೇಶ್ ಅರಸ್, ವಿಶ್ವನಾಥ್, ಶಶಿ, ದಿನೇಶ್, ಧರ್ಮ ಎಂ.ಜಿ., ಪ್ರಕಾಶ್, ಹೊನ್ನಪ್ಪ ಇತರರಿದ್ದರು.