ಹೊಳಲು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಇದ್ದರು.  
ಹಾಸನ

ಕಾಫಿ ಬೆಳೆಗೆ ರಾಸಾಯನಿಕ ಗೊಬ್ಬರ ಬಳಕೆ ಬೇಡ

ಕಾರ್ಜುವಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಲಹೆ

ಬೇಲೂರು: ಕಾಫಿ ಬೆಳೆಗಾರರು ತಮ್ಮ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಕಾಫಿ ಬೀಜದ ಗುಣಮಟ್ಟ ಹೆಚ್ಚುವುದಲ್ಲದೆ, ಆರೋಗ್ಯವನ್ನೂ ಕಾಪಾಡುತ್ತದೆ ಎಂದು ಕಾರ್ಜುವಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿಕ್ಕೋಡು ಹೋಬಳಿ ಹೊಳಲು ಗ್ರಾಮದಲ್ಲಿ ಭೂಮಿಪುತ್ರ ಬೆಳೆಗಾರರ ಸಂಘ ಹಾಗೂ ನಂದಿ ಟ್ರೇಡರ್ಸ್‌ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಕಾಫಿ ದಿನಾಚರಣೆ ಮತ್ತು ನಂದಿ ಟ್ರೇಡರ್ಸ್‌ ಲೋಗೋ ಬಿಡುಗಡೆ ಹಾಗೂ ಕಾಫಿ ಬೆಳೆಗಾರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾಫಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡಿದರೆ ಭವಿಷ್ಯದಲ್ಲಿ ಕಾಫಿಗೆ ಬೆಲೆ ಇರುವುದಿಲ್ಲ. ಬೆಲೆಯೂ ಕುಂಠಿತವಾಗಲಿದೆ ಜತೆಗೆ ಆರೋಗ್ಯವೂ ಕೆಡುತ್ತದೆ. ಆದ್ದರಿಂದ ಸಾವಯವ ಗೊಬ್ಬರ ಬಳಕೆ ಉತ್ತಮ. ಅಲ್ಲದೆ ಯುವಕರಿಗೆ ಕಾಫಿ ಬೆಳೆಯತ್ತ ಆಸಕ್ತಿ ಮೂಡಿಸುವ ಉದ್ದೇಶವಿದೆ ಎಂದರು.

ಇತ್ತೀಚಿನ ವರ್ಷದಲ್ಲಿ ಯುವ ಜನತೆಯಲ್ಲಿ ಕಾಫಿ ಬಗೆಗಿನ ಆಸಕ್ತಿ ಕ್ಷೀಣಿಸುತ್ತಿದ್ದು, ಇದರಿಂದ ಕಾಫಿಗಷ್ಟೇ ಹಾನಿಯಾಗದೆ ಮಲೆನಾಡು ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಕಾರಣದಿಂದ ಯುವ ಜನತೆಯಲ್ಲಿ ಕಾಫಿ ಬೆಳೆ ಬಗ್ಗೆ ಗಮನ ಸೆಳೆಯುವುದಕ್ಕಾಗಿ ಶಿರಸಿಯಲ್ಲಿದ್ದ ಕಾರ್ಯಕ್ರಮ ಮುಂದೂಡಿ ಇಲ್ಲಿನ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥಶೆಟ್ಟಿ ಮಾತನಾಡಿ, ಕಾಫಿ ಬೆಳೆಗಾರರು ಆರ್‌ಎಸ್‌ಪಿ ಕಂಪೆನಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಒಳ್ಳೆಯದು. ನೋಂದಣಿ ಆದ ತಕ್ಷಣ ದೃಢೀಕರಣ ಪತ್ರದ ಜತೆ ಕಾಫಿ ತೋಟಕ್ಕೆ ಕೋಡ್ ನಂಬರ್ ನೀಡಲಿದ್ದಾರೆ. ಈ ನಂಬರ್ ಅನ್ನು ಹೊರದೇಶಕ್ಕೆ ಕಳುಹಿಸಿ ಕೊಡಲಿದ್ದಾರೆ. ಇದರಿಂದ ಜಿಪಿಎಸ್ ಮೂಲಕ ತೋಟದ ಎಲ್ಲವನ್ನೂ ಗಮನಿಸುತ್ತಾರೆ. ಇದನ್ನು ಮಾಡಿಸುವುದರಿಂದ ಸಹಜವಾದ ಕಾಫಿ ಬೆಳೆಗೂ ದೃಢೀಕರಣಗೊಂಡ ಕಾಫಿ ಬೆಳೆಗೂ 300 ರೂ. ವ್ಯತ್ಯಾಸ ಇರಲಿದೆ ಎಂದರು.

ನಂದಿ ಟ್ರೇಡರ್ಸ್‌ ಮಾಲೀಕ ಹರ್ಷಿತ್ ಮಾತನಾಡಿ, ಕಾಫಿ ಬೆಳೆಯಲ್ಲಿ ಔಟನ್ ತೂಕದ ಆಧಾರಿತವಾಗಿ ಬೆಳೆಗಾರರಿಗೆ ಹೆಚ್ಚು ಬೆಲೆ ಸಿಗಲಿದೆ. ಮಾರಾಟ ಮಾಡುವಾಗ ಬೀಜವನ್ನು ಎಷ್ಟು ಪ್ರಮಾಣದಲ್ಲಿ ಒಣಗಿಸಬೇಕೆಂಬುದರ ಕುರಿತು ಅಂಕಿ ಅಂಶ ಸಹಿತ ಮಾಹಿತಿ ಒದಗಿಸಿದರು.

ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಬಿ.ರೇಣುಕಾನಂದ, ತಾ.ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಚಿಕ್ಕಮಗಳೂರಿನ ವಿವಿಧ ಕಾಫಿ ಕ್ಯೂರಿಂಗ್ ವಕ್ಸ್ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.