ಶ್ರವಣಬೆಳಗೊಳ: ರಸಗೊಬ್ಬರಕ್ಕೆ ಅಧಿಕ ಹಣ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ, ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಹಾಗೂ ದರ ಏರಿಕೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸಗೊಬ್ಬರ ಮಾರಾಟಗಾರರು ರೈತರಿಗೆ ನಿಗದಿತ ಬೆಲೆಯಲ್ಲಿ ಗೊಬ್ಬರ ನೀಡದೆ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಸಬ್ಸಿಡಿ ಸೌಲಭ್ಯಗಳು ಸಾಮಾನ್ಯ ರೈತನಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪ್ರತಿ ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ಕಡ್ಡಾಯವಾಗಿ ಎಂಆರ್ಪಿ ದರ ಪಟ್ಟಿ ಪ್ರಕಟಿಸಬೇಕು. ಧ್ವನಿ ಎತ್ತುವ ರೈತರಿಗೆ ಒಂದು ಬೆಲೆ, ಅಮಾಯಕ ರೈತರಿಗೆ ಮತ್ತೊಂದು ಬೆಲೆ ವಿಧಿಸಿ ಸುಲಿಗೆ ಮಾಡುವುದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಮಂಜಣ್ಣ ಮಾತನಾಡಿ, ಪ್ರಸ್ತುತ ಒಂದು ಟನ್ ಕಬ್ಬಿಗೆ 3,200 ರೂ.ನೀಡುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಸಾಕಾಗುತ್ತ್ಲ್ಲಿ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಬ್ಬಿನ ದರವನ್ನು ಪ್ರತಿ ಟನ್ಗೆ 5 ಸಾವಿರ ರೂ.ನಿಂದ 6,500 ರೂ.ವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಮಾರುತಿ ಸರ್ಕಲ್ನಿಂದ ನಾಡಕಚೇರಿವರೆಗೆ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಹೋಬಳಿ ಅಧ್ಯಕ್ಷ ಚನ್ನೇಗೌಡ, ಮುಖಂಡರಾದ ಕೃಷ್ಣೇಗೌಡ, ಸಾಗರ್ ಗೌಡ, ಪರಮ ಜಯರಾಮ್, ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.