ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಚಿಕ್ಕೋಲೆ ಸಿ. ರಘು, ನಾಗೇಂದ್ರಪ್ಪ ದೇವರಾಜ್, ಮರಿಯಾ ಪಿಂಟೋ ಇತರರಿದ್ದರು. 
ಹಾಸನ

ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ

Study with concentration.

ಬೇಲೂರು: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸಿದ್ದು, ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚಿಕ್ಕೋಲೆ ಸಿ. ರಘು ಹೇಳಿದರು.

ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಸನ ವಿಶ್ವ ವಿದ್ಯಾಲಯ, ಕಾಲೇಜು ಶಿಕ್ಷಣ ಇಲಾಖೆ, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಸನ ಮಾನಸಿಕ ಆರೋಗ್ಯ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧರಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಅಂಟಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿ ಜೀವನ ಹಾಳು ಮಾಡಿ ಕೊಳ್ಳುತಿದ್ದಾರೆ ಎಂದರು ಬೇಸರ ವ್ಯಕ್ತ ಪಡಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮಾನಸಿಕ ತಜ್ಞ ಡಾ.ಕಾರ್ತಿಕ್ ಮಾತನಾಡಿ, ಮಾನಸಿಕ ಸಮಸ್ಯೆ ಎದುರಾದಾಗ ಭಯ ಅಥವಾ ಕೀಳರಿಮೆ ಬಿಟ್ಟು ವೈಜ್ಞ್ಞಾನಿಕವಾಗಿ ಚಿಂತಿಸಬೇಕು. ತಜ್ಞರಿಂದ ಸೂಕ್ತ ಸಲಹೆ, ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡುವುದು, ಅವೈಜ್ಞಾನಿಕ ಮಾರ್ಗ ಅನುಸರಿಸುವುದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣ ಸಾಧ್ಯತೆ ಇದೆ. ಪ್ರಾರಂಭದಲ್ಲಿಯೇ ತಜ್ಞರ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಮಾನಸಿಕವಾಗಿ ಸದೃಢರಾಗಿ ಏಕಾಗ್ರತೆಯಿಂದ ಉತ್ತಮ ವಿದ್ಯಾಭ್ಯಾಸಕ್ಕೆ ಮುಂದಾಗಬೇಕು. ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಟೆಲಿ ಮಾನಸ್ ಉಚಿತ ಸೇವೆ ಆರಂಭಿಸಿದ್ದು 14416 ಸಹಾಯವಾಣಿಗೆ ಕರೆ ಮಾಡಿ ಮನೋವೈದ್ಯರು ಅಥವಾ ವಿಜ್ಞಾನಿಗಳಿಂದ ಸಲಹೆ, ಸಮಾಲೋಚನೆ ಮಾಡಬಹುದು. ಈ ಸೇವೆ ದಿನದ 24 ಗಂಟೆಯೂ ಲಭ್ಯವಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಉಪನ್ಯಾಸಕ ವೀರಭದ್ರಪ್ಪ ಮಾತನಾಡಿ, ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು 18 ರಿಂದ 22 ವರ್ಷ ವಯೋಮಾನದವರಾಗಿದ್ದು, ಈ ಹಂತದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಯುವ ಮನಸ್ಸುಗಳು ಚಂಚಲತೆ ಹಾಗೂ ಗೊಂದಲಗಳಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಮಾನಸಿಕ ಆರೋಗ್ಯದ ಕುರಿತು ಸೂಕ್ತ ಅರಿವು ಮೂಡಿಸಲಾಗುತ್ತಿದೆ ಎಂದರು.

ಪ್ರಾಂಶುಪಾಲ ನಾಗೇಂದ್ರಪ್ಪ, ಉಪನ್ಯಾಸಕರಾದ ದೇವರಾಜ್, ಮರಿಯಾ ಪಿಂಟೋ, ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಮಧು, ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.