ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. 
ಹಾಸನ

ಉಜ್ಜಯಿನಿ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿ

ಭಗವತ್ಪಾದರಿಗೆ ಭಕ್ತ ವೃಂದದಿಂದ ಪುಷ್ಪಾರ್ಚನೆ

ಬೇಲೂರು: ಪಂಚ ಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪುರ ಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವವು ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೂ ಸುರಿದ ಮಳೆಯ ನಡುವೆಯೂ ಸಹಸ್ರಾರು ಭಕ್ತರ ಜೈಕಾರದ ನಡುವೆ ವೈಭವದಿಂದ ಅದ್ದೂರಿಯಾಗಿ ನೆರವೇರಿತು.

ಬೇಲೂರು ತಾಲೂಕಿನ ಹಗರೆ ಮೂಲಕ ಪಟ್ಟಣ ಪ್ರವೇಶಿಸಿದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಕಳಸ ಹೊತ್ತ ಮಹಿಳೆಯರು ಮಂಗಳವಾದ್ಯದೊಂದಿಗೆ ಸ್ವಾಗತಿಸಿದರೆ, ಸುಮಂಗಲಿಯರು ಆರತಿ ಬೆಳಗಿ ಗೌರವ ಸಮರ್ಪಿಸಿದರು. ಪುಷ್ಪಾಲಂಕೃತ ಮಂಟಪದಲ್ಲಿ ಆಸೀನರಾದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಭಕ್ತ ವೃಂದವು ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು.

ಯಸಳೂರು ತೆಂಕಲಗೂಡು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನೆಹರೂ ನಗರದ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ಸಮೀಪದಿಂದ ಪ್ರಾರಂಭವಾದ ವೈಭವದ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆಯೂ ಯಗಚಿ ನದಿ ಸೇತುವೆ ಮೂಲಕ ಪಟ್ಟಣದ ಮುಖ್ಯರಸ್ತೆಯ ರಾಜ ಬೀದಿಯಲ್ಲಿ ಸಾವಿರಾರು ಭಕ್ತರೊಂದಿಗೆ ಸಾಗಿ ಬರುತ್ತಿದ್ದ ಸಂದರ್ಭ ದಾರಿಯುದ್ದಕ್ಕೂ ವಿವಿಧ ಜಾನಪದ ಕಲಾ ತಂಡಗಳ ಅದ್ದೂರಿ ಪ್ರದರ್ಶನ ನಡೆಯಿತು.

ಮೆರವಣಿಗೆಯಲ್ಲಿ ಉಜ್ಜಯಿನಿ ಜಗದ್ಗುರುಗಳ ಸ್ತಬ್ಧ ಚಿತ್ರಗಳು ರಾರಾಜಿಸಿದವು. ಅಡ್ಡಪಲ್ಲಕಿಯ ಮೆರವಣಿಗೆಯಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಉಜ್ಜಯಿನಿ ಜಗದ್ಗುರುಗಳಿಗೆ ಜೈಕಾರ ಕೂಗಿದರು. ಮುಖ್ಯರಸ್ತೆ ಮೂಲಕ ಜಗದ್ಗುರುಗಳ ಅಡ್ಡಪಲ್ಲಕ್ಕಿಯೂ ಬಸವೇಶ್ವರ ವೃತ್ತದಿಂದ, ಹರ್ಡೀಕರ್ ವೃತ್ತ, ಕೆಂಪೇಗೌಡ ವೃತ್ತದ ಮೂಲಕ ಡಾ.ಅಂಬೇಡ್ಕರ್ ವೃತ್ತದಿಂದ ನೇರವಾಗಿ ಕಾರ್ಯಕ್ರಮ ನಡೆಯುವ ವೀರಶೈವ ಕಲ್ಯಾಣ ಮಂಟಪಕ್ಕೆ ತಲುಪಿತು. ಈ ಸಂದರ್ಭ ಉಜ್ಜಯಿನಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ, ಇಷ್ಟಲಿಂಗ ಮಹಾಪೂಜೆ, ಧರ್ಮ ಜಾಗೃತಿ ಸಮಾವೇಶ, ಶಿವದೀಕ್ಷಾ ಶ್ರೀವೀರಭದ್ರೇಶ್ವರರ ಜಯಂತ್ಯುತ್ಸವ ಸಮಿತಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸ್ವಾಗತಿಸಿ ಬರ ಮಾಡಿಕೊಂಡರು. ಅಲ್ಲದೆ ಧರ್ಮ ಸಮ್ಮೇಳನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಸಮಿತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಹುಲಿಕೆರೆ, ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪುರವರ್ಗ ಮಠ ನುಗ್ಗೇಹಳ್ಳಿಯ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೇರುಗುಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಶಾಸಕ ಎಚ್.ಕೆ.ಸುರೇಶ್, ವೀಣಾ ಕಾಶಪ್ಪನವರ್, ಇಂಪು ಸಂತೋಷ್, ಪುರಸಭೆ ಉಪಾಧ್ಯಕ್ಷೆ ಉಷಾ ಸತೀಶ್, ಮುಖಂಡರಾದ ಗಂಗೂರು ಶಿವಕುಮಾರ್, ಅಮಿತ್ ಶೆಟ್ಟಿ, ಮಸಾಲೆ ಮಂಜಣ್ಣ, ಕೌರಿ ವಿಕ್ರಮ್, ಅದ್ದೂರಿ ಚೇತನ್, ದೊಡ್ಡವೀರೇಗೌಡ, ಕಟ್ಟಾಯ ಶಿವಕುಮಾರ್, ಎಂ.ಎ.ನಾಗರಾಜ್, ವೀರಶೈವ ಪುರೋಹಿತರ ಕ್ಷೇಮಾಬಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿರೂಪಾಕ್ಷ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಬಿ.ಶಿವರಾಜ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಸಮಾಜದ ಮುಖಂಡರಾದ ಗ್ರಾನೈಟ್ ರಾಜಶೇಖರ, ಕೊರಟಕೇರೆ ಪ್ರಕಾಶ್, ನಟರಾಜ್ ಐಸಾಮಿಗೌಡ, ಸಿದ್ದೇಶ್ ನಾಗೇಂದ್ರ, ಚೇತನ್ ಗೆಂಡೇಹಳ್ಳಿ. ಹಗರೆ ಈಶ್ವರಪ್ಪ, ಅರುಣ್ ಕುಮಾರ್, ಆನಂದ್ ಇತರರಿದ್ದರು.