ಅರಸೀಕೆರೆ ಗ್ರಾಮಾಂತರ: ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರ ತರುವ ಕಾರ್ಯಕ್ರಮ ಪ್ರತಿಭಾಕಾರಂಜಿ. ಇದರಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಲು ಸಹಕಾರಿಯಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಹೇಳಿದರು.
ತಾಲೂಕಿನ ಹಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅದನ್ನು ಹೊರ ತರುವ ಅವಕಾಶ ಈ ಕಾರ್ಯಕ್ರಮದಲ್ಲಿ ಲಭ್ಯವಾಗುತ್ತಿದೆ. ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ ಇದಾಗಿದೆ. ಶಿಕ್ಷಣ ಇಲಾಖೆ ಉತ್ತಮ ಕಾರ್ಯಕ್ರಮವನ್ನು ಒದಗಿಸಿಕೊಟ್ಟಿದೆ. ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಪಾಲಕರು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಶಾಂತಮ್ಮ ಮಾತನಾಡಿ, ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಉತ್ಸಾಹ ಮತ್ತು ಆತ್ಮಸ್ಥೈರ್ಯ ಮೂಡುತ್ತದೆ ಎಂದು ಹೇಳಿದರು.
ಬಿಆರ್ಪಿ ಸಿದ್ದರಾಮಪ್ಪ ಮಾತನಾಡಿ, ಮಕ್ಕಳಿಗೆ ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿ ಅಡಗಿರುವ ಪ್ರತಿಭೆ ಹೊತರಲು ಸಾಧ್ಯ. ಮಕ್ಕಳಲ್ಲಿ ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರಲ್ಲಿ ಹೆಚ್ಚಿನ ಜ್ಞಾನಾರ್ಜನೆಗೆ ಅವಕಾಶವಾಗುತ್ತದೆ ಎಂದರು.
ಹಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ ಸೋಮಶೇಖರ್, ಹಾರನಹಳ್ಳಿ ಕ್ಲಸ್ಟರ್ ಸಿಆರ್ಪಿ ಬೀರಪ್ಪ ಇತರರಿದ್ದರು.