ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನವನ್ನು ಗಣ್ಯರು ಉದ್ಘಾಟಿಸಿದರು. 
ಹಾಸನ

ಅಹಿಂಸಾತ್ಮಕ ಚಿಂತನೆ ಅಳವಡಿಸಿಕೊಳ್ಳೋಣ

ಬೇಲೂರು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಆಶಯ

ಬೇಲೂರು: ಮಹಾತ್ಮ ಗಾಂಧಿ ಅವರ ಅಹಿಂಸಾತ್ಮಕ ಹೋರಾಟ, ಲಾಲ್ ಬಹಾದೂರ್ ಶಾಸ್ತ್ರಿ ಅವರ ತ್ಯಾಗ, ಬಲಿದಾನ ಆದರ್ಶ ಪ್ರಾಯವಾಗಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಗಾಂಧಿ ಅವರ ನಾಯಕತ್ವದ ಗುಣವು ಭಾರತದ ಎಲ್ಲ ಧರ್ಮೀಯರಲ್ಲಿ ಸೌಹಾರ್ದ, ಸಾಮರಸ್ಯ ಕಾಪಾಡಲು ಕಾರಣವಾಗಿತ್ತು. ಶಾಂತಿಯುತ ಸತ್ಯಾಗ್ರಹದ ಮೂಲಕ ಹೋರಾಟದ ಕಿಚ್ಚನ್ನು ದೇಶದ ಜನತೆಗೆ ಸಾರಿದ್ದಲ್ಲದೆ, ಜನರನ್ನು ಸಂಘಟಿಸಿ ಸ್ವಾತಂತ್ರ್ಯ ಪಡೆಯಲು ಜನರಿಗೆ ಪ್ರೇರಣೆಯಾದರು. ಅವರ ಅಹಿಂಸಾತ್ಮಕ ಚಿಂತನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಲಾಲ್ ಬಹಾದೂರ್ ಶಾಸ್ತ್ರಿ ಅವರು, ಜೈ ಜವಾನ್-ಜೈಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಜನರಿಗೆ ಸೈನಿಕರು, ರೈತರ ಮಹತ್ವವನ್ನು ಸಾರಿದರು. ಪ್ರತಿಯೊಬ್ಬರೂ ಮಹಾನ್ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.

ಸರ್ವಧರ್ಮದ ಅರ್ಚಕ ಕೆ.ಆರ್.ಮಂಜುನಾಥ್ ಭಗವದ್ಗೀತೆ, ಮಹಮದ್ ಅಶ್ರಬ್ ಕುರ್-ಅನ್, ಎನ್ನಿ ಮೋರಸ್ ಬೈಬಲ್ ಸಾರಾಂಶವನ್ನು ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಎಸ್‌ಐ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಕೆಎಆರ್‌ಟಿಸಿ ಡಿಪೋ ವ್ಯವಸ್ಥಾಪಕ ನಾಗರಾಜ್ ಕಾರ್ವಿ, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ಮುದುಕಪ್ಪ, ತೋಟಗಾರಿಕಾ ಇಲಾಖೆಯ ಯತೀಶ್ ಇತರರಿದ್ದರು.