ಹೊಳೆನರಸೀಪುರ: ತುಮಕೂರಿನ ಸಿದ್ಧಗಂಗಾ ಮಠದಿಂದ ಬೆಂಗಳೂರಿಗೆ ಗ್ರಾಮ ಪಂಚಾಯಿತಿಯ ಪಂಚ ನೌಕರರು ಅ.12ರಂದು ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಹೋರಾಟದಲ್ಲಿ ತಾಲೂಕಿನ 26 ಗ್ರಾಮ ಪಂಚಾಯಿತಿಯ ಪಂಚ ನೌಕರರು ಭಾಗವಹಿಸಲಿದ್ದಾರೆ ಎಂದು ತಾಲೂಕು ಪಂಚ ನೌಕರರ ಸಮಿತಿ ಸದಸ್ಯ ನರಸಿಂಹ ತಿಳಿಸಿದರು.
ಪಟ್ಟಣದ ಹೇಮಾವತಿ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 26 ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚ ನೌಕರರಾದ ಡೇಟಾ ಎಂಟ್ರಿ ಆಪರೇಟರ್‌ಗಳು, ಕರ ವಸೂಲಿಗಾರರು, ನೀರುಗಂಟಿಗಳ, ಜವಾನರು ಹಾಗೂ ಸ್ವಚ್ಛತಾಗಾರರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ನಿಯಮದಡಿ ಎರಡು ತಿಂಗಳ ವೇತನ ಪಡೆಯಲಾಗಿದ್ದು, ನಂತರ ಸರ್ಕಾರ ಆದೇಶವನ್ನು ಹಿಂಪಡೆದಿದೆ. ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದು, ಕನಿಷ್ಠ ವೇತನ ಜಾರಿ ತಡೆಹಿಡಿಯಲಾಗಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರಿವವರೆಗೂ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ತಾಲೂಕು ಪಂಚ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಸಮಿತಿ ಸದಸ್ಯರಾದ ಮೋಹನ್‌ಕುಮಾರ್, ಕೆ.ಪಿ.ಲಕ್ಷ್ಮೀ, ಮಹಾದೇವಿ ಭಾಗ್ಯಮ್ಮ ಹೇಮಂತ್ ಕುಮಾರ್, ರವಿಕುಮಾರ್, ಮೋಹನ ಮತ್ತಿತರರಿದ್ದರು.