ಕಾಫಿ 
ಹಾಸನ

ಅ.1ರಂದು ಅಂತಾರಾಷ್ಟ್ರೀಯ ಕಾಫಿ ದಿನ

ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮಾಹಿತಿ

ಸಕಲೇಶಪುರ: ಕಾಫಿ ಬೆಳೆಗಾರರನ್ನು ಉತ್ತೇಜಿಸುವ ಹಾಗೂ ಕಾಫಿ ಕ್ಷೇತ್ರಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನ, ಕೃಷಿ ಪರಿಕರಗಳು ಮತ್ತು ಪರ್ಯಾಯ ಆದಾಯದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ 12ನೇ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಅಕ್ಟೋಬರ್ 1ರಂದು ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ತಿಳಿಸಿದರು.

2015ರಲ್ಲಿ ಆರಂಭಗೊಂಡ ಕಾಫಿ ದಿನ ಕಳೆದ 11ವರ್ಷಗಳಲ್ಲಿ ಭರತವಳ್ಳಿ, ಹಾಸನ, ಬೇಲೂರು, ಹಳೆಬೀಡು, ಮೈಸೂರು ಅರಮನೆ ಹಾಗೂ ಕೆಂಪೇಗೌಡ ಶಾಸನದ ಆವರಣ ಸೇರಿದಂತೆ ವಿವಿಧೆಡೆ ನಡೆದಿದೆ. ಈ ಬಾರಿ ರಾಷ್ಟ್ರೀಯ ಹೆದ್ದಾರಿ 75ರ ಹೊಸೂರು ಹೋಟೆಲ್ ವೃತ್ತದ ಮುಂಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭರತನಾಟ್ಯ, ಚಂಡೆ ವಾದ್ಯ, ಮಲೆನಾಡು ನೃತ್ಯ, ಕರಾಟೆ ಪ್ರದರ್ಶನ ಹಾಗೂ ಸ್ತಬ್ಧಚಿತ್ರಗಳ ಪ್ರದರ್ಶನ ಇರಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹೆಗ್ಗಾವಿ ಪುಟ್ಟರಾಜು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಕಾರ್ಯಕ್ರಮ ನಡೆಸಿಕೊಡಲಿದ್ದು, ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ಕಾಫಿ ವಿತರಣೆ ಕಾರ್ಯಕ್ರಮ ಹಾಗೂ ಶಾಸಕ ಸಿಮೆಂಟ್ ಮಂಜು ಕೃಷಿ ವಸ್ತುಪ್ರದರ್ಶನ ಉದ್ಘಾಟಿಸುವರು. ಶಾಸಕರಾದ ಎಚ್.ಕೆ. ಸುರೇಶ್, ಎ.ಮಂಜು, ಡಾ.ಸೂರಜ್ ರೇವಣ್ಣ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್, ಕೆಜಿಎಫ್ ಅಧ್ಯಕ್ಷ ಎಚ್.ಬಿ.ಶಿವಣ್ಣ, ಕಾಫಿ ಮಂಡಳಿ ಸಿಇಒ ಕುಮಾರ್ ರಾವ್, ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಚಿತ್ರನಟ ಗುರುನಂದನ್, ನಟಿ ತಪಸ್ವಿನಿ ಪೂರ್ಣಚ್ಚ, ಮಿಸ್ ಇಂಡಿಯಾ ಹೇಮಾ ನಿರಂಜನ್ ಹಾಗೂ ಮಿಸ್ ಟೀನ್ ಇಂಡಿಯಾ ಸಾಚಿ ಸ್ಮಯ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, 35ಕ್ಕೂ ಹೆಚ್ಚು ಕೃಷಿ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಗೊಬ್ಬರ, ಗಿಡಮದ್ದು, ಸ್ಪಿಂಕ್ಲರ್, ನೀರಾವರಿ ಉಪಕರಣಗಳು, ಕಾಫಿ ಡ್ರೈಯರ್‌ಗಳು, ಹೋಮ್‌ಮೇಡ್ ಚಾಕೊಲೇಟ್ ಹಾಗೂ ವಿವಿಧ ವಾಹನಗಳ ಪ್ರದರ್ಶನ ಇರಲಿದೆ. ಅಣಬೆ ಬೇಸಾಯ ಕುರಿತು ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಆಲೂರು, ಸಕಲೇಶಪುರ, ಅರಕಲಗೂಡು ಹಾಗೂ ಬೇಲೂರು ತಾಲೂಕುಗಳ ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಸಚಿನ್, ರವಿ ಇದ್ದರು.