ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾಯ ನಿರ್ರ್ವಹಣಾಧಿಕಾರಿ ಶುಭಂ ಶುಕ್ಲ ಹಿಮ್ಸ್ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಡಿಎಚ್‌ಒ ಡಾ.ಅನಿಲ್ ಕುಮಾರ್, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಡಾ.ರಾಘವೇಂದ್ರ ಪ್ರಸಾದ್ ಇತರರಿದ್ದರು.
- ಹಿಮ್ಸ್ ಮಕ್ಕಳ ಆಸ್ಪತ್ರೆಗೆ ಜಿಪಂ ಸಿಇಒ ದಿಢೀರ್ ಭೇಟಿ
- 3 ಗಂಟೆಗೂ ಹೆಚ್ಚು ಕಾಲ ವಿವಿಧ ವಿಭಾಗಗಳ ಪರಿಶೀಲನೆ
- ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿ
ಹಾಸನ: ಜಿಲ್ಲೆಯ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಂ ಶುಕ್ಲ ಗುರುವಾರ ಹಿಮ್ಸ್ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇದ್ದರೂ ಸಹ ಆಸ್ಪತ್ರೆಗೆ ಆಗಮಿಸಿ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಆಸ್ಪತ್ರೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಪ್ರಯೋಗಾಲಯ, ಐಸಿಯು, ಒಪಿಡಿ, ಐಪಿಡಿ, ನವಜಾತ ಶಿಶು ಘಟಕ, ಸಮಾಲೋಚನಾ ವಿಭಾಗ ಸೇರಿ ವಿವಿಧ ವಿಭಾಗಗಳಿಗೆ ತೆರಳಿ ಸೌಲಭ್ಯಗಳು, ಚಿಕಿತ್ಸಾ ಕ್ರಮಗಳು, ಸ್ವಚ್ಛತೆ ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರು. ಪ್ರತಿ ವಿಭಾಗದಲ್ಲಿಯೂ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಇಲ್ಲಿನ ಸಮಸ್ಯೆ, ಅವಶ್ಯಕತೆ ಮತ್ತು ಸುಧಾರಣೆಗೆ ಬೇಕಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, ಹಿಮ್ಸ್ ಮಕ್ಕಳ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೇವೆ ಮತ್ತು ಸೌಲಭ್ಯ ನೋಡಿದಾಗ ಕೆಲವೊಂದು ವಿಷಯಗಳಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೌಲಭ್ಯ, ವ್ಯವಸ್ಥೆ ಇಲ್ಲಿವೆ ಎಂದು ಹೇಳಬಹುದು. ವಿಶೇಷವಾಗಿ ಸ್ವಚ್ಛತೆ, ಮಕ್ಕಳ ಮತ್ತು ತಾಯಿ ಆರೈಕೆ ಮತ್ತು ವೈದ್ಯಕೀಯ ಸೇವೆಗಳ ವ್ಯವಸ್ಥೆ ಗಮನ ಸೆಳೆಯುವಂತಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯಿಂದ ಕೆಲ ಸೌಲಭ್ಯಗಳ ಬೇಡಿಕೆ ಮತ್ತು ಸಮಸ್ಯೆ ನಿವಾರಣೆಗೆ ಬಗ್ಗೆ ಮನವಿ ಬಂದಿದ್ದು, ಅವುಗಳನ್ನು ಪರಿಶೀಲಿಸಿ ಯಾವ ಯೋಜನೆ ಅಥವಾ ಅನುದಾನದಡಿ ಸೌಲಭ್ಯ ಕಲ್ಪಿಸಬಹುದು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ಪ್ರತಿ ಅಂಶವನ್ನೂ ಗಮನಿಸಲಾಗುತ್ತಿದೆ. ವಿಶೇಷವಾಗಿ ತಾಯಂದಿರು ಮತ್ತು ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು ಎಂಬುದು ಸರ್ಕಾರದ ಆದ್ಯತೆ ಎಂದರು.
ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತಾಯಂದಿರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ, ನವಜಾತ ಶಿಶುಗಳ ಆರೈಕೆ ಹಾಗೂ ಪೌಷ್ಟಿಕತೆ ಸಂಬಂಧಿತ ವಿಚಾರಗಳ ಕುರಿತು ವೈದ್ಯರೊಂದಿಗೆ ಚರ್ಚೆ ನಡೆಸಲಾಗಿದೆ . ಕೆಲವು ವಿಭಾಗಗಳಲ್ಲಿ ಇನ್ನೂ ಅಭಿವೃದ್ಧಿಯ ಅಗತ್ಯವಿದ್ದು, ಅವುಗಳನ್ನು ಹಂತ ಹಂತವಾಗಿ ಸುಧಾರಿಸುವ ಕಾರ್ಯ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಲಾಗುವುದು. ಮುಂದಿನ ಬಾರಿ ಪೂರ್ವ ಸೂಚನೆ ಇಲ್ಲದೆ ಅನಿರೀಕ್ಷಿತ ಭೇಟಿ ನೀಡುತ್ತೇನೆ. ಆ ವೇಳೆ ಸೇವೆಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಮತ್ತೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇರುವುದನ್ನು ಒಪ್ಪಿಕೊಂಡ ಅವರು, ಕೆಲ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಕಂಡು ಬಂದಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಗತ್ಯ ಇರುವ ಕಡೆ ಮಾನವ ಸಂಪನ್ಮೂಲ ಒದಗಿಸುವ ಬಗ್ಗೆ ಪರಿಶೀಲನೆ ನಡೆಯಲಿದೆ. ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೂ ಸಾರ್ವಜನಿಕ ಸೇವೆಗೆ ಲಭ್ಯವಾಗದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವೂ ಸಹ ಬೇಗ ಆರಂಭಿಸಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಅನವಶ್ಯಕ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಕಾಮಗಾರಿ ಪ್ರಕ್ರಿಯೆಗಳನ್ನು ವೇಗಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿ ನಮಗೆ ತೃಪ್ತಿ ತಂದಿದೆ. ದೊಡ್ಡ ಮಟ್ಟದ ಸಮಸ್ಯೆ ಇಲ್ಲ. ಕೆಲವು ಸಣ್ಣಪುಟ್ಟ ಅಡಚಣೆ ಸರಿಪಡಿಸಿಕೊಳ್ಳಬೇಕಾಗಿದೆ. ಆಸ್ಪತ್ರೆಗೆ ಬಂದ ತಾಯಂದಿರ ಜತೆಗೂ ಮಾತನಾಡಿದ್ದೇವೆ. ಅವರೂ ಕೂಡ ಇಲ್ಲಿನ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಹಲವರು ಖಾಸಗಿ ಆಸ್ಪತ್ರೆಗಿಂತ ಇಲ್ಲಿನ ಸೇವೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.
ಡಿಎಚ್‌ಒ ಡಾ.ಅನಿಲ್ ಕುಮಾರ್, ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಶಸ್ತ್ರ ಚಿಕಿತ್ಸಕ ಡಾ.ರಾಘವೇಂದ್ರ ಪ್ರಸಾದ್ ಇತರರಿದ್ದರು.