ಅರಕಲಗೂಡು ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದೇವಿಯ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. 
ಹಾಸನ

ವಿವಿಧೆಡೆ ಸಂಭ್ರಮದ ಯುಗಾದಿ

ಅರಕಲಗೂಡು: ತಾಲೂಕಿನ ವಿವಿಧೆಡೆ ಯುಗಾದಿ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ವಿವಿಧ ಗ್ರಾಮಗಳ ಭಕ್ತರು ದೇವರ ಮೂರ್ತಿಗಳನ್ನು ರಾಮನಾಥಪುರ ಸಮೀಪದ ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಸ್ನಾನ ಮಾಡಿಸಿದ ಬಳಿಕ ಮಂಗಳವಾದ್ಯದ ಮೂಲಕ ಸ್ವಗ್ರಾಮಕ್ಕೆ ಕರೆದೊಯ್ದು ಉತ್ಸವ ನಡೆಸಿದರು. ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಪಟ್ಟಣದ ಗ್ರಾಮದೇವತೆ ದೊಡ್ಡಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಬೇವು ಬೆಲ್ಲ ನೈವೇದ್ಯ ಸ್ವೀಕರಿಸಿದರು. ಬಸವಾಪಟ್ಟಣದ ಗ್ರಾಮದೇವತೆ ಶ್ರೀ ಕಾಲುಮೆ ಅಮ್ಮ ದೇವರ ಉತ್ಸವ ಸಂಭ್ರಮದಿಂದ ಜರುಗಿತು. ಕಾಳೇನಹಳ್ಳಿ ಗ್ರಾಮದೇವತೆ ಶ್ರೀ ದಿಡ್ಡಮ್ಮ ದೇವರ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಹಳ್ಳಿಗಳಲ್ಲಿ ರೈತರು ಗೋ ಪೂಜೆ ಸಲ್ಲಿಸಿ ಹೊಲಗಳಿಗೆ ಹೊನ್ನಾರು ಹೂಡಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.