ಹೊಳೆನರಸೀಪುರ ತಾಲೂಕಿನ ಚಿಕ್ಕ ಕಾಡುನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹೊನ್ನಾರು ಕಟ್ಟಿ ಹಬ್ಬ ಆಚರಿಸಿದರು. 
ಹಾಸನ

ಹೊನ್ನಾರು ಕಟ್ಟಿ ಭೂಮಿ ಉಳುಮೆ

ಹೊಳೆನರಸೀಪುರ: ಯುಗಾದಿ ಹಬ್ಬದ ದಿನದಂದು ತಾಲೂಕಿನ ಚಿಕ್ಕಕಾಡನೂರು ಗ್ರಾಮಸ್ಥರು ಹೊನ್ನಾರು ಕಟ್ಟುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಸಂಪ್ರದಾಯದಂತೆ ಗ್ರಾಮದ ಪಟೇಲರ ಮನೆಯವರು ಮೊದಲ ಆರುಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸುತ್ತಾರೆ. ಉಳಿದ ಆರುಗಳು ಸಾಲಾಗಿ ಹಿಂಬದಿಯಲ್ಲಿ ಸೇರ್ಪಡೆಗೊಳ್ಳುತ್ತವೆ. ಮೊದಲಿಂದಲೂ ನಡೆದು ಬಂದಂತೆ ಪಟೇಲರ ಮನೆಯವರು ಪೂಜೆ ಸಲ್ಲಿಸಿದ ನಂತರ ಭೂಮಿ ಉಳುಮೆ ಪ್ರಾರಂಭಿಸಲಾಗುತ್ತದೆ. ಎಲ್ಲರೂ ಹೊಲದೊಳಗೆ ಆರುಗಳನ್ನು ಓಡಾಡಿಸಿ ಸಂಭ್ರಮಿಸಿದರು. ಗ್ರಾಮದ ಮಹಿಳೆಯರು, ಮಕ್ಕಳು ಒಂದೆಡೆ ಸೇರಿ ಹಬ್ಬಕ್ಕೆ ಮೆರುಗು ನೀಡಿದರು.
20 ವರ್ಷಗಳ ಹಿಂದೆ ಗ್ರಾಮದಲ್ಲಿ ನೂರಾರು ಜೋಡೆತ್ತುಗಳು ಸೇರುತ್ತಿದ್ದವು. ವಿವಿಧ ರೀತಿಯ ಅಲಂಕಾರ ಮಾಡುತ್ತಿದ್ದೆವು. ನಾವು ಕೂಡ ವಿಶೇಷ ವೇಷಭೂಷಣಗಳನ್ನು ತೊಟ್ಟು ಗ್ರಾಮಸ್ಥರನ್ನು ರಂಜಿಸುತ್ತಿದ್ದೆವು. ಅಂದಿನ ಕಾಲದ ಹಬ್ಬದ ಆಚರಣೆ ಇಂದು ಕಡಿಮೆಯಾಗಿದೆ ಎಂದು ತಮ್ಮಣ್ಣಗೌಡ ಹೇಳಿದರು.
ಯಂತ್ರೋಪಕರಣಗಳು ಹೆಚ್ಚಾಗಿರುವುದರಿಂದ ಜಾನುವಾರುಗಳನ್ನು ಸಾಕುವುದು ಕಡಿಮೆಯಾಗಿದೆ. ಗ್ರಾಮದಲ್ಲಿ 15 ರಿಂದ 20 ಜೊತೆ ಜಾನುವಾರುಗಳನ್ನು ಸಾಕಿದ್ದಾರೆ. ಎಲ್ಲರೂ ಹೊನ್ನಾರು ಕಟ್ಟುವುದಿಲ್ಲ, ಕೆಲವರು ಭಾಗವಹಿಸುತ್ತಾರೆ. ಜನರಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಸ್ವಾಮಿಗೌಡ ಹೇಳಿದರು.
ತಾಲೂಕಿನಾದ್ಯಂತ ಗುರುವಾರ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಜಾನುವಾರುಗಳನ್ನು ಸಿಂಗರಿಸಿ ಪೂಜಿ ಸಲ್ಲಿಸಲಾಯಿತು. ಹಲವು ಗ್ರಾಮಗಳಲ್ಲಿ ಜೋಡೆತ್ತುಗಳಿಂದ ಎಲ್ಲರೂ ಒಟ್ಟುಗೂಡಿ ಒಂದೇ ಸ್ಥಳದಲ್ಲಿ ಉಳುಮೆ ಮಾಡಿದರು.
ಮಲ್ಲೇನಹಳ್ಳಿ ಗ್ರಾಮದಲ್ಲಿ ಸುಮಾರು 55 ಜೋಡಿ ಎತ್ತುಗಳ ಹೊನ್ನಾರು ಕಟ್ಟುವ ಮೂಲಕ ಗ್ರಾಮಸ್ಥರು ಹಬ್ಬ ಆಚರಿಸಿದರು. ಬಾಗಿವಾಳು ಗ್ರಾಮದ ಶ್ರೀ ರಾಮೇಶ್ವರ ಅದ್ದೂರಿ ಕರಗ ಮಹೋತ್ಸವ ಹಾಗೂ ವೀರಭದ್ರ ಸ್ವಾಮಿ ಪೂಜಾ ಮಹೋತ್ಸವ ಜರುಗಿತು. ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಜತೆಗೆ ಶ್ರೀ ಆಂಜನೇಯ ಸ್ವಾಮಿ ಉತ್ಸವ ಜರುಗಿತು.