ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಸಿ.ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕೃಷ್ಣರಾಜ್, ಬಸವರಾಜು, ದೇವರಾಜೇಗೌಡ, ಸುಮಿತ್ರಮ್ಮ, ವಿಶ್ವನಾಥ್, ಅರುಣ್ ಕುಮಾರ್, ಕಾಂತರಾಜು, ರಾಜೇಶ್ ಇತರರಿದ್ದರು.
ಅರಕಲಗೂಡು: ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚು ಒತ್ತು ನೀಡುವ ಮೂಲಕ ರೈತರು ಕಾಫಿ ತೋಟದಲ್ಲಿ ಅಂತರ ಬೆಳೆಯಾಗಿ ಕಾಳು ಮೆಣಸು, ಏಲಕ್ಕಿ, ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಲಾಭ ಕಂಡುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಎಂ.ಸಿ.ರಂಗಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಒಂದೇ ಬೆಳೆ ನೆಚ್ಚಿಕೊಳ್ಳದೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆದಾಯ ತರುವ ಮಿಶ್ರ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ವಿದ್ಯಾವಂತ ಯುವಕರು ಪ್ರಯೋಗಾತ್ಮಕವಾಗಿ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ವಿದ್ಯೆ ಕಲಿತು ಸರ್ಕಾರಿ ಉದ್ಯೋಗ ನೆಚ್ಚಿಕೊಳ್ಳದೆ ಹೈನುಗಾರಿಕೆಯೊಂದಿಗೆ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡು ಅವಿಭಕ್ತ ಕುಟುಂಬದಲ್ಲಿ ಏಳಿಗೆ ಕಂಡುಕೊಂಡ ತೃಪ್ತಿ ನನಗಿದೆ. ಸರ್ಕಾರ ಕೂಡ ಕೃಷಿ ಮತ್ತು ಹೈನುಗಾರಿಕೆಗೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸಿ ರೈತಾಪಿ ವರ್ಗದ ಜನರಿಗೆ ನೆರವಾಗಬೇಕು ಎಂದು ಹೇಳಿದರು.
ಹಾಸನ ಕಾಫಿ ಮಂಡಳಿ ಉಪ ನಿರ್ದೇಶಕ ಶಕ್ತಿ ಮಾತನಾಡಿ, ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಮಾಹಿತಿ ಪಡೆದು ಕೃಷಿ ಕೈಗೊಳ್ಳಬೇಕು. ಮಂಡಳಿ ವತಿಯಿಂದ ಕಾಫಿ ಬೆಳೆಗಾರರಿಗೆ ಸವಲತ್ತುಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿದರು. ಕಾಫಿ ಬೆಳೆಗಾರರಾದ ಕೃಷರಾಜ್, ಬಸವರಾಜು, ವೆಂಕಟೇಶ್, ಕಾಂತರಾಜು, ದೇವರಾಜೇಗೌಡ, ವಿಶ್ವನಾಥ್, ವಿಜಯ್, ಅರುಣ್ ಕುಮಾರ್, ಸುಮಿತ್ರಮ್ಮ, ಎಚ್.ಡಿ. ಶಿವಣ್ಣ, ಧರಣಿ, ಪ್ಲಾಂಟರ್ಸ್ ಸಂಘದ ಲೋಹಿತ್ ಇತರರಿದ್ದರು. 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಸಿ. ರಂಗಸ್ವಾಮಿ ಅವರನ್ನು ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.