ಬೇಲೂರು ಶ್ರೀ ಚನ್ನಕೇಶವಸ್ವಾಮಿ ವಸತಿ ನಿಲಯದಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮವನ್ನು ಪುಷ್ಪಗಿರಿ ಧಾರ್ಮಿಕ ಪರಿಷತ್ ಅಧ್ಯಕ್ಷ ಡಾ.ಎಂ.ಸಿ.ಕುಮಾರ್ ಉದ್ಘಾಟಿಸಿದರು.
ಬೇಲೂರು: ಯುವ ಜನಾಂಗ ದೇಶದ ಆಸ್ತಿ. ಯುವ ಜನತೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ಸದೃಢವಾದ ದೇಶ ಕಟ್ಟಲು ಸಾಧ್ಯ ಎಂದು ಪುಷ್ಪಗಿರಿ ಧಾರ್ಮಿಕ ಪರಿಷತ್ ಅಧ್ಯಕ್ಷ ಡಾ.ಎಂ.ಸಿ.ಕುಮಾರ್ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ವಸತಿ ನಿಲಯದಲ್ಲಿ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ, ಜಿಪಂ ಹಾಗೂ ಮೈ ಭಾರತ್ ಕೇಂದ್ರ ಹಾಸನ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಕರು ದೇಶದ ನಿಜವಾದ ಸಂಪನ್ಮೂಲ. ಯುವ ಶಕ್ತಿಯ ಕೊಡುಗೆ ದೇಶಕ್ಕೆ ಅತ್ಯವಶ್ಯಕವಾಗಿದೆ. ಇದರೆ ಸದ್ಬಳಕೆ ಅನಿವಾರ್ಯವಾಗಿರುವ ಕಾರಣ ಪ್ರಧಾನಿ ಮೋದಿ ಅವರು ಯುವಜನರ ಸಂಘಟನೆ ದೇಶ, ಭಾಷೆ, ನೆಲ, ಜಲ ಸಂರಕ್ಷಿಸಲು ದೂರದೃಷ್ಟಿಯುಳ್ಳ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಇದನ್ನು ಅರ್ಥಮಾಡಿಕೊಂಡು ಯುವ ಜನತೆ ದೇಶವನ್ನು ಸದೃಢಗೊಳಿಸಲು ಸಂಘಟಿತರಾಗಬೇಕು. ಜತೆಗೆ ಹಳೇಬೀಡು-ಬೇಲೂರು ವಿಶ್ವ ಭೂ ಪಟದಲ್ಲಿ ಹೆಸರು ಮಾಡಿರುವ ಹಾಗೂ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿರುವ ಪ್ರೇಕ್ಷಣೀಯ ತಾಣ. ಇಂತಹ ಶಿಲ್ಪ ಕಲೆ ಹಾಗೂ ಹೊಯ್ಸಳರು ಕಲೆ ವಾಸ್ತು ಶಿಲ್ಪಕ್ಕೆ ನೀಡಿದ ಕೊಡುಗೆ, ಸ್ಮಾರಕಗಳನ್ನ ಸಂರಕ್ಷಿಸುವುದು, ಇದನ್ನು ಮುಂದಿನ ಪೀಳಿಗೆಗೆ ಉಳಿಸುವುದು ಯುವಜನತೆಯ ಜವಾಬ್ದಾರಿಯಾಗಿದೆ. ಅಲ್ಲದೆ ಬೇಲೂರು-ಹಳೇಬೀಡು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಕುಡಿಯುವ ನೀರು, ಶೌಚಗೃಹ, ಸಾರಿಗೆ ಸಂಪರ್ಕ ವ್ಯವಸ್ಥೆ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಹಳೇಬೀಡು-ಬೇಲೂರು ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು. ಇವುಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಆಗಬೇಕು. ಆಗ ಮಾತ್ರ ಅಭಿವೃದ್ಧಿಯನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಅಧಿಕಾರಿ ಅಜಿತ್, ಗ್ಲೋಬಲ್ ಸೋಶಿಯಲ್ ಫೌಂಡೇಷನ್ ಅಧ್ಯಕ್ಷ ಇಮ್ರಾನ್ ಅಹಮದ್ ಬೈಗ್, ಲೆಕ್ಕಾಧಿಕಾರಿ ರತ್ನ ಶೇಖರ್, ಸಂಚಾಲಕ ಹರೀಶ್ ಸೇರಿದಂತೆ ಇತರರಿದ್ದರು.