ರಸ್ತೆ ಅಪಘಾತದಲ್ಲಿ ನಗರ್ತಿ ಗ್ರಾಮದ ದೇವರಾಜು ಅವರ ಪುತ್ರ ಯಶವಂತ್ಮೃತ  
ಹಾಸನ

ಜಾರ್ಖಂಡ್‌ನಲ್ಲಿ ಯುವಕ ಸಾವು

ಹೊಳೆನರಸೀಪುರ: ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಶ್ರವಣೂರು ಗ್ರಾಮ ಪಂಚಾಯಿತಿಯ ನಗರ್ತಿ ಗ್ರಾಮದ ದೇವರಾಜು ಅವರ ಪುತ್ರ ಯಶವಂತ್ ಎನ್.ಡಿ.(21) ಶವವನ್ನು ಸ್ವಗ್ರಾಮಕ್ಕೆ ತರಿಸುವಲ್ಲಿ ಶಾಸಕ ಎಚ್.ಡಿ.ರೇವಣ್ಣ ನೆರವಾಗಿದ್ದಾರೆ.
ಜುಲೈ 5ರಂದು ಯಶವಂತ್ ಅಪಘಾತದಲ್ಲಿ ಮೃತಟ್ಟಿದ್ದ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರು ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸಿಕೊಟ್ಟು, ಬಡ ರೈತ ಕುಟುಂಬದ ಸಂಕಷ್ಟಕ್ಕೆ ನೆರವಾಗಿದ್ದಾರೆ.
ಜಾರ್ಖಂಡ್‌ನಲ್ಲಿ ಕಂಟೈನರ್ ಚಾಲಕನಾಗಿದ್ದ ಯಶವಂತ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಾಧ್ಯವಾಗದೆ ಪಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಷಯವನ್ನು ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರ ಗಮನಕ್ಕೆ ತಂದಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಸ್ಪಂದಿಸಿದ ಶಾಸಕರು, ಸಹೋದರ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೊಬೈಲ್‌ನಲ್ಲಿ ಪರಿಸ್ಥಿತಿಯ ನ್ನು ವಿವರಿಸಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಮೃತ ಚಾಲಕನ ಪಾಲಕರಿಗೆ ಕರೆ ಮಾಡಿ ಸಾಂತ್ವನ ಹೇಳಿದರು. ಜಾಖರ್ಂಡ್‌ನಿಂದ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಅದರಂತೆ ಸೋಮವಾರ ಮೃತದೇಹವು ಸ್ವಗ್ರಾಮಕ್ಕೆ ಆಗಮಿಸಿತು. ನಂತರ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ತಂದೆ, ತಾಯಿ, ಸಹೋದರಿ ಇದ್ದಾರೆ.