ಹಾಸನದ ಸಹಕಾರ ಆಸ್ಪತ್ರೆಯ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಪಿ. ಸ್ವರೂಪ್ ಪ್ರಕಾಶ್, ಎಸ್.ಎನ್. ಪ್ರಕಾಶ್, ಆರ್.ಟಿ. ದ್ಯಾವೇಗೌಡ, ಕೆ.ಎಸ್.ಮಂಜೇಗೌಡ, ಡಿ.ಬಿ.ಸೋಮೇಗೌಡ, ನಾಗರಾಜು ಇತರರಿದ್ದರು.
- ದಾದಿಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
- ಶಾಸಕ ಸ್ವರೂಪ್ ಪ್ರಕಾಶ್ ಶ್ಲಾಘನೆ
- ತರಬೇತಿ ಕಾರ್ಯಕ್ರಮ
ಹಾಸನ: ಪ್ರತಿದಿನ ತಮ್ಮ ಸೇವೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಿರುವ ದಾದಿಯರ ಸೇವೆ ಅಪಾರ. ಇವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ಸಂಜೀವಿನಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಎಚ್.ಪಿ. ಸ್ವರೂಪ್ ಪ್ರಕಾಶ್ ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿ., ಹಾಸನ ಮತ್ತು ಸಹಕಾರ ಇಲಾಖೆ ಆಶ್ರಯದಲ್ಲಿ ಸಹಕಾರ ಆಸ್ಪತ್ರೆಯ ಸಿಬ್ಬಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಸಹಕಾರ ತತ್ವಗಳಿಗೆ ಅನುಗುಣವಾಗಿ ಇಡೀ ರಾಜ್ಯದಲ್ಲಿರುವ ಎರಡು ಸಹಕಾರ ಆಸ್ಪತ್ರೆಗಳಲ್ಲಿ ನಮ್ಮ ಸಂಜೀವಿನಿ ಸಹಕಾರಿ ಆಸ್ಪತ್ರೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಕಾರಣ ಇಲ್ಲಿನ ಸಿಬ್ಬಂದಿ, ವೈದ್ಯರು ಹಾಗೂ ಆಡಳಿತ ಮಂಡಳಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎಸ್.ಎನ್. ಪ್ರಕಾಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಸುಮಾರು 30 ರಿಂದ 35 ರೀತಿಯ 2 ಸಾವಿರ ಸಹಕಾರ ಸಂಘಗಳಿದ್ದು, ಅದರಲ್ಲಿ ನಮ್ಮ ಜಿಲ್ಲೆಯ ಸಂಜೀವಿನಿ ಸಹಕಾರ ಆಸ್ಪತ್ರೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಸಹಕಾರ ತತ್ವದಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಆಸ್ಪತ್ರೆ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಸಹಕಾರಿಗಳಿಗೆ ಉತ್ತಮವಾದ ಅತಿ ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಟಿ. ದ್ಯಾವೇಗೌಡ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಕೆ.ಎಸ್.ಮಂಜೇಗೌಡ, ಒಕ್ಕೂಟದ ಉಪಾಧ್ಯಕ್ಷ ಡಿ.ಬಿ.ಸೋಮೇಗೌಡ, ನಾಗರಾಜು, ಪುಟ್ಟಸ್ವಾಮಿಗೌಡ, ಪದ್ಮರಾಜು, ಪ್ರವೀಣ್, ಸೋಮಣ್ಣ, ಸಿದ್ದೇಶ್ ಹಾಗೂ ಸಂಜೀವಿನಿ ಸಹಕಾರ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.