ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತಾಲೂಕು ಯಾದವ ಸಂಘದಿಂದ ಶ್ರೀ ಚನ್ನಕೇಶವ ದೇಗುಲ ಮುಂಭಾಗದಲ್ಲಿ ಆಯೋಜಿಸಿದ್ದ ಮಹೋತ್ಸವದಲ್ಲಿ ಯುವಕರು ಮೊಸರು ಕುಡಿಕೆ ಒಡೆದರು. 
ಹಾಸನ

ಮೊಸರು ಕುಡಿಕೆ ಒಡೆಯುವ ಮಹೋತ್ಸವ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ
  • ಯಾದವ ಸಂಘದಿಂದ ಆಯೋಜನೆ
ಬೇಲೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತಾಲೂಕು ಯಾದವ ಸಂದಿಂದ ಶ್ರೀ ಚನ್ನಕೇಶವ ದೇಗುಲ ಮುಂಭಾಗದಲ್ಲಿ ಮೊಸರು ಕುಡಿಕೆ ಒಡೆಯುವ ಮಹೋತ್ಸವ ಹಾಗೂ ಕಂಸವಧೆ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ಅದ್ದೂರಿಯಾಗಿ ಆಚರಿಸಲಾಯಿತು.
ಮೊಸರು ಕುಡಿಕೆ ಉತ್ಸವಕ್ಕೂ ಮುನ್ನ ಚನ್ನಕೇಶವ ದೇಗುಲದ ಅರ್ಚಕರು ನವರಂಗದಲ್ಲಿ ಬಾಳೆ ಕಂಬಗಳಿಂದ ಸೆರೆಮನೆ ನಿರ್ಮಿಸಿ, ಶ್ರೀಕೃಷ್ಣ, ಬಲರಾಮರ ವಿಗ್ರಹಗಳನ್ನು ಮರದ ತೊಟ್ಟಿಲಲ್ಲಿಟ್ಟು ತೂಗುವ ಮೂಲಕ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ನಂತರ ಸೌಮ್ಯಕೇಶವ ಹಾಗೂ ಶ್ರೀಕೃಷ್ಣನ ಪಂಚಲೋಹದ ವಿಗ್ರಹಗಳನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ ಮಂಗಳ ವಾದ್ಯಗಳೊಂದಿಗೆ ದೇಗುಲದ ನಾಲ್ಕು ಬೀದಿಗಳು ಹಾಗೂ ವೈಕುಂಠ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ದೇಗುಲದ ಮುಂಭಾಗಕ್ಕೆ ಆಗಮಿಸಿದ ಬಳಿಕ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜತೆಯಲ್ಲೆ ಚನ್ನಕೇಶವ ದೇಗುಲದ ರಾಜ ಗೋಪುರದ ಮುಂಬಾಗ ಕುರುಜಿ ಮಂಟಪ ನಿರ್ಮಿಸಿ, ಎತ್ತರದಲ್ಲಿ ಹಾಲು, ಬೆಣ್ಣೆ ಹಾಗೂ ನವಧಾನ್ಯಗಳಿಂದ ತುಂಬಿದ ಐದು ಮಡಿಕೆಗಳನ್ನು ಕಟ್ಟಲಾಗಿತ್ತು. ಯಾದವ ಸಂಘದ 20ಕ್ಕೂ ಹೆಚ್ಚು ಯುವಕರು ಮಂಟಪದ ಸುತ್ತ ಪ್ರದಕ್ಷಿಣೆ ಹಾಕಿ, ಪರಸ್ಪರ ಹೆಗಲೇರಿಕೊಂಡು ಮಾನವ ಗೋಪುರ ನಿರ್ಮಿಸಿ, ಒಂದರ ಹಿಂದೆ ಒಂದರಂತೆ ಮಡಿಕೆಗಳನ್ನು ಒಡೆದು ಸಂಭ್ರಮಿಸಿದರು. ಮಡಿಕೆ ಒಡೆಯುವ ಸಂದರ್ಭದಲ್ಲಿ ಭಕ್ತರು ಗೋವಿಂದ ಗೋವಿಂದ ಎಂಬ ಘೋಷಣೆಗಳು ಕೂಗಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಮಕ್ಕಳು ಶ್ರೀಕೃಷ್ಣ,ರಾಧೆಯರ ವೇಷಧರಿಸಿ ಗಮನ ಸೆಳೆದರು. ಯಾದವ ಸಂಘದಿಂದ ಪ್ರತಿ ವರ್ಷ ನಡೆಯುವ ಈ ಸಂಪ್ರದಾಯಿಕ ಉತ್ಸವದಲ್ಲಿ ವೇಷಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ತಹಸೀಲ್ದಾರ್ ಶ್ರೀಧರ ಕಂಕನವಾಡಿ, ಪಿಐ ರೇವಣ್ಣ, ಪಿಎಸ್‌ಐ ಶಿವಾನಂದ ಪಾಟೀಲ್, ದೇಗುಲದ ಅರ್ಚಕರಾದ ಶ್ರೀನಿವಾಸ ಭಟ್ಟರ್, ನರಸಿಂಹ ಭಟ್ಟರ್, ಯಾದವ ಸಂಘದ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಅಣ್ಣೇಗೌಡ, ಕಾರ್ಯಾಧ್ಯಕ್ಷ ಎಸ್.ಕೆ.ನಾಗೇಶ್, ಉಪಾಧ್ಯಕ್ಷ ಕೇಶವಮೂರ್ತಿ, ಪದಾಧಿಕಾರಿಗಳಾದ ಬಿ.ಸಿ.ಆನಂದ್, ಪರುಷೋತ್ತಮ್, ರವಿ, ಆಡಿಟರ್ ಕೃಷ್ಣಮೂರ್ತಿ ಸೇರಿದಂತೆ ಸುರಪುರ ಗ್ರಾಮದ ಗ್ರಾಮಸ್ಥರು ಯಾದವ ಸಮುದಾಯದವರು ಮತ್ತು ಭಕ್ತರಿದ್ದರು.