ಹಾಸನ ನಗರದ ಎಸ್.ಜೆ.ಪಾರ್ಕ್ ಯೋಗ ಗೆಳೆಯರ ವಿವಿಧೋದ್ದೇಶ ಸಂಘದ ವತಿಯಿಂದ ಇತ್ತೀಚೆಗೆ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುರೇಶ್ ಪ್ರಜಾಪತಿ, ನಾಗೇಶ್, ಪವನ್, ಮೋಹನ್‌ಕುಮಾರ್, ಪುರುಷೋತ್ತಮ್, ಎಚ್.ಕೆ.ರವಿ, ಗಿಡ್ಡೇಗೌಡ, ಸುಂದರರಾಜ್, ನಾಗರಾಜ್, ಮೋಹನ್‌ಕುಮಾರ್ ಇತರರಿದ್ದರು. 
ಹಾಸನ

ಯೋಗದಿಂದ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಲಭ್ಯ

ಪ್ರಮುಖ ಮುಖ್ಯಾಂಶಗಳು

  • ಯೋಗದಿಂದ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಲಭ್ಯ
  • ಎಸ್.ಜೆ.ಪಾರ್ಕ್ ಯೋಗ ಗೆಳೆಯರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಸುರೇಶ್ ಪ್ರಜಾಪತಿ ಅಭಿಮತ

ಹಾಸನ:

ಸಾರ್ವಜನಿಕರಲ್ಲಿ ಯೋಗದ ಮಹತ್ವದ ಕುರಿತು ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ನಗರದ ಎಸ್.ಜೆ.ಪಾರ್ಕ್ ಯೋಗ ಗೆಳೆಯರ ವಿವಿಧೋದ್ದೇಶ ಸಂಘದ ವತಿಯಿಂದ ಇತ್ತೀಚೆಗೆ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷ ಸುರೇಶ್ ಪ್ರಜಾಪತಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರು ಯೋಗಾಭ್ಯಾಸ ಮಾಡಿದರು.

ನಂತರ ಮಾತನಾಡಿದ ಸುರೇಶ್ ಪ್ರಜಾಪತಿ, ಇಂದಿನ ಯಾಂತ್ರಿಕ ಬದುಕಿನಲ್ಲಿ ಜನರು ಮಾನಸಿಕ ಒತ್ತಡ, ಖಿನ್ನತೆ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಬಳಲುತ್ತಿದ್ದಾರೆ. ಉದ್ಯೋಗ, ವ್ಯಾಪಾರ ಹಾಗೂ ವೈಯಕ್ತಿಕ ಜವಾಬ್ದಾರಿಗಳ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಯೋಗಾಭ್ಯಾಸವು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಅತ್ಯುತ್ತಮ ಸಾಧನವಾಗಿದೆ ಎಂದರು.
ಹಾಸನದ ಪ್ರತಿಯೊಂದು ಮನೆಗೂ ಯೋಗದ ಮಹತ್ವವನ್ನು ತಲುಪಿಸುವುದು ಹಾಗೂ ಯೋಗದ ಮೂಲಕ ಆರೋಗ್ಯವಂತ ಮತ್ತು ಸಾಮರಸ್ಯ ಸಮಾಜ ನಿರ್ಮಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ಸೂಕ್ಷ್ಮ ವ್ಯಾಯಾಮ, ಸೂರ್ಯನಮಸ್ಕಾರ, ವಿವಿಧ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನಾಭ್ಯಾಸ ನಡೆಸಲಾಯಿತು.
ಬಳಿಕ ಭಜನೆ ಕಾರ್ಯಕ್ರಮದ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಿಸಲಾಗಿದ್ದು, ಯೋಗ ಸಾಧಕರಿಗಾಗಿ ವಿಶೇಷ ಮನರಂಜನಾ ಆಟೋಟಗಳನ್ನು ಆಯೋಜಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಚೈತನ್ಯ ತುಂಬಲಾಯಿತು.
ಯೋಗಾಭ್ಯಾಸದ ಬಳಿಕ ಎಲ್ಲ ಸಾಧಕರು ತಮ್ಮ ಮನೆಗಳಿಂದ ತಂದಿದ್ದ ಸಾತ್ವಿಕ ಆಹಾರ ಹಾಗೂ ಹಣ್ಣಿನ ಜ್ಯೂಸ್ ಅನ್ನು ಪರಸ್ಪರ ಹಂಚಿಕೊಂಡು ಸೇವಿಸಿದರು.
ಸಂಘದ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಪವನ್, ಖಜಾಂಚಿ ಮೋಹನ್‌ಕುಮಾರ್, ನಿರ್ದೇಶಕ ಪುರುಷೋತ್ತಮ್, ಎಚ್.ಕೆ. ರವಿ, ಗಿಡ್ಡೇಗೌಡ, ಸುಂದರರಾಜ್, ನಾಗರಾಜ್, ಮೋಹನ್‌ಕುಮಾರ್, ಮಂಜಣ್ಣ, ರಂಗಸ್ವಾಮಿ, ಕುಮಾರ್, ಲಕ್ಷ್ಮೀ, ಬ್ರಮ್ಯಾ, ಸವಿತಾ ಮಂಜುನಾಥ್, ಸುನಿತಾ ಇತರರಿದ್ದರು.