ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ನ್ಯಾಯಾಧೀಶರು ಸೇರಿದಂತೆ ಶಾಲಾ ಮಕ್ಕಳು ಯೋಗಾಭ್ಯಾಸ ಮಾಡಿದರು. 
ಹಾಸನ

ಜಗತ್ತಿನ ಅಧ್ಯಾತ್ಮಕ್ಕೆ ಭಾರತದ ಕೊಡುಗೆ ಯೋಗ

ಪ್ರಮುಖ ಮುಖ್ಯಾಂಶಗಳು

  • Yoga is India's contribution
ಚನ್ನರಾಯಪಟ್ಟಣ: ಭಾರತವು ವಿಶ್ವಕ್ಕೆ ನೀಡಿರುವ ಅತ್ಯಮೂಲ್ಯ ಮತ್ತು ಶಾಶ್ವತ ಕೊಡುಗೆಗಳೆಂದರೆ ಯೋಗ ಮತ್ತು ಅಧ್ಯಾತ್ಮ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ಎಂ.ಎಸ್.ಕಲ್ಪನಾ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರದಂದು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಪೂರ್ಣಚಂದ್ರ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮತ್ತು ಅಧ್ಯಾತ್ಮ ಕೇವಲ ಭಾರತದ ಸಾಂಸ್ಕೃತಿಕ ಪರಂಪರೆ ಮಾತ್ರವಲ್ಲದೆ, ಇಡೀ ಮಾನವಕುಲದ ದೈಹಿಕ, ಮಾನಸಿಕ ಆರೋಗ್ಯಕ್ಕೆ ಭಾರತ ನೀಡಿರುವ ಜಾಗತಿಕ ದಾರಿದೀಪಗಳಾಗಿವೆ. ಯೋಗವು ಕೇವಲ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲನವನ್ನು ಕಾಪಾಡುವ ಅದ್ಭುತ ಸಾಧನವಾಗಿದೆ. ವಿಶ್ವಸಂಸ್ಥೆಯು ಜೂ. 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ. ಇಂದು ಪ್ರಪಂಚದಾದ್ಯಂತ 190ಕ್ಕೂ ಹೆಚ್ಚು ದೇಶಗಳು ಇದನ್ನು ಆಚರಿಸುತ್ತಿವೆ ಎಂದು ತಿಳಿಸಿದರು.
ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸಿ.ಕೆ.ವಿಜಯಕುಮಾರ್ ಮಾತನಾಡಿ, ನಿಯಮಿತ ಯೋಗಾಭ್ಯಾಸವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯ ಬಡಿತವನ್ನು ಸ್ಥಿರಗೊಳಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತದೆ. ಪ್ರಾಣಾಯಾಮದಂತಹ ಅಭ್ಯಾಸಗಳು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ, ದೇಹಕ್ಕೆ ಆಮ್ಲಜನಕದ ಪೂರೈಕೆಯನ್ನು ಸುಗಮಗೊಳಿಸುತ್ತವೆೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಪಟು ಕುಮಾರಿ ವಿಸ್ಮಿತಾ ಅವರನ್ನು ಸನ್ಮಾನಿಸಲಾಯಿತು.
ನ್ಯಾಯಾಧೀಶರು ಹಾಗೂ ಗಣ್ಯರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಯೋಗಭ್ಯಾಸ ಮಾಡಿದರು. ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ವಿ.ಕುಸುಮಾ, ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣ ಕುಮಾರಿ, ಪೂರ್ಣಚಂದ್ರ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆಶಾ ವಿಜಯ್ ಕುಮಾರ್, ಪ್ರಾಂಶುಪಾಲ ಮಂಜುನಾಥ್ ಜಕ್ಕಳ್ಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಡಿ.ಕೆ.ಮಂಜುನಾಥ್, ರೋಟರಿ ಸಂಸ್ಥೆ ಅಧ್ಯಕ್ಷೆ ಜ್ಯೋತಿ ಶ್ರೀನಿವಾಸ್, ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷೆ ನೇತ್ರಾ ನವೀನ್, ಅಗ್ನಿಶಾಮಕ ಠಾಣೆಯ ಅಧಿಕಾರಿ ವೆಂಕಟೇಶ್, ಸ್ನೇಹಮಯಿ ವಿವೇಕಾನಂದ ಯೋಗಾಶಾಲೆಯ ಮಂಜುನಾಥ್ ಅಡಗೂರು ಸೇರಿದಂತೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.