ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಭಾನುವಾರ ನಗರದ ಮಹಾರಾಜ ಪಾರ್ಕ್ ನಲ್ಲಿರುವ ಶ್ರೀವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗಪಟುಗಳು ಯೋಗಾಭ್ಯಾಸ ಮಾಡಿದರು.ಯೋಗ ಗುರು ಗೊರೂರು ಶಿವೇಶ್ ಮಾತನಾಡಿದರು. ಹರೀಶ್, ಧರ್ಮಣ್ಣ, ಪುಟ್ಟಪ್ಪ ಇತರರಿದ್ದರು.
- ಮನಸ್ಸನ್ನು ಸದೃಢಗೊಳಿಸಲು ಯೋಗ ಸಹಕಾರಿ
- ಗೊರೂರು ಶಿವೇಶ್ ಅಭಿಪ್ರಾಯ
- ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಹಾಸನ: ಕೆಲವೇ ಜನರು ಮಾಡುತ್ತಿದ್ದ ಯೋಗ ಇಂದು ವಿಶ್ವವ್ಯಾಪಿ ಪ್ರಚಾರವಾಗಿ ಹಲವು ರಾಷ್ಟ್ರಗಳಲ್ಲಿ ಯೋಗ ಅಭ್ಯಾಸ ಮಾಡಲಾಗುತ್ತಿದೆ ಎಂದು ಶ್ರೀ ವಿವೇಕಾನಂದ ಯೋಗ ಶಿಕ್ಷಣ ಶಾಲೆಯ ಯೋಗ ಗುರು ಗೊರೂರು ಶಿವೇಶ್ ಹೇಳಿದರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಭಾನುವಾರ ನಗರದ ಮಹಾರಾಜ ಪಾರ್ಕ್‌ನಲ್ಲಿರುವ ಶ್ರೀವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದಲ್ಲಿ ಹಿಂದೆ ಒಂದೆರಡು ಯೋಗ ಶಾಲೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇಂದು ಯೋಗ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಯೋಗದ ಜತೆ ಜತೆಗೆ ಮಾಡುವ ಪ್ರಾಣಾಯಾಮ ಮನಸ್ಸನ್ನು ಸದೃಢಗೊಳಿಸುತ್ತವೆ ಎಂದರು.
ಯೋಗ ಶಿಕ್ಷಕ ಸಿ.ಕೆ.ಹರೀಶ್ ಮಾತನಾಡಿ, ಯೋಗದಲ್ಲಿ ಹಲವು ಶಾಖೆಗಳಿದ್ದು, ಯೋಗ ಕಲಿತಷ್ಟು ಕಡಿಮೆಯೇ. 25 ವರ್ಷದಿಂದ ಸಾಸಿವೆಯಷ್ಟು ಕಲಿತಿದ್ದೇವೆ. ಅದು ಇಷ್ಟು ಸತ್ಫಲ ನೀಡುವಾಗ ಸಂಪೂರ್ಣ ಯೋಗ ಅರ್ಥವಾದರೆ ಮನುಷ್ಯ ಯಾವ ಮಟ್ಟಿಗೆ ಉನ್ನತಿ ಹೊಂದಬಹುದು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಯೋಗ ಆಂತರಿಕ ಯಾತ್ರೆಯಾಗಿದ್ದು, ಅರಿಷಡ್ವರ್ಗಗಳನ್ನು ಗೆಲ್ಲಲು ಯೋಗ ಸಹಕಾರಿಯಾಗಿದೆ. ಕಾಮ, ಕ್ರೋಧ, ಮದ ಮತ್ಸರಗಳನ್ನು ಗೆಲ್ಲಲು ಯೋಗ ಸಹಕಾರಿಯಾಗಿದೆ. ಸಕಲ ಪ್ರಾಣಿಗಳಲ್ಲೂ ಪ್ರೀತಿ ಹೊಂದಿರಬೇಕು ಎಂಬುದನ್ನು ಯೋಗ ತಿಳಿಸುತ್ತದೆ. ಮನಸ್ಸನ್ನು ಸಮಸ್ಥಿತಿಯಲ್ಲಿಡಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.
ಯೋಗಿಗಳು ಎಲ್ಲರನ್ನೂ ಪ್ರೀತಿಸಬೇಕು. ಅದೇ ರೀತಿ ಯೋಗ ಮಾಡುವವರು ಕೂಡ ಸಾತ್ವಿಕವಾಗಿರಬೇಕು. ಮನಸ್ಸಿಗೆ ಸಂತೋಷ ನೀಡುವ ನಿಟ್ಟಿನಲ್ಲಿ ಯೋಗ ಸಹಕಾರಿ. ಸಣ್ಣ ಸಿಟ್ಟು ಬದುಕನ್ನು ಬದಲಿಸುತ್ತದೆ. ಅದೇ ರೀತಿ ಯೋಗ ಕೂಡ ಬದುಕನ್ನು ಬದಲಿಸುತ್ತದೆ. ನಮ್ಮನ್ನು ನಾವು ಗೆಲ್ಲಲು ಸಾಧ್ಯವಿಲ್ಲದೆ ಏನೂ ಸಾಧ್ಯವಿಲ್ಲ. ನಮ್ಮ ಮನಸ್ಸನ್ನು ಗೆಲ್ಲಲು ಯೋಗ ಸಹಕಾರಿಯಾಗಿದೆ.
ಯೋಗದ ಮೂಲಕ ಸನ್ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದ ಬಗ್ಗೆ ಜಾಗೃತಿ ಇರಬೇಕು. ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು. ಬೇರೆಯವರನ್ನು ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು. ಯೋಗದಿಂದ ಆಂತರಿಕ ಶಕ್ತಿ ವೃದ್ಧಿಸಲಿದ್ದು, ಮನುಷ್ಯನ ದೇಹಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ ಎಂದರು.
ಯೋಗ ಶಿಕ್ಷಕ ಧರ್ಮಣ್ಣ, ಪುಟ್ಟಪ್ಪ ಹಾಗೂ ಯೋಗಪಟುಗಳು ಭಾಗವಹಿಸಿದ್ದರು.