-ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇಗುಲದ ಒಳ ಆವರಣದಲ್ಲಿ ಯೋಗಭ್ಯಾಸದಲ್ಲಿ ಪಾಲ್ಗೊಂಡಿದ್ದ ಗಣ್ಯರು, ವಿದ್ಯಾರ್ಥಿಗಳು, ಯೋಗಪಟುಗಳು.
ಬೇಲೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಒಳ ಆವರಣದಲ್ಲಿ ತಾಲೂಕು ಆಡಳಿತ, ಪುರಸಭೆ, ದೇಗುಲ ಆಡಳಿತ, ನಮನ್ ನಿಮಾನ್ಸ್ ಬೆಂಗಳೂರು ಹಾಗೂ ಪತಂಜಲಿ, ರಾಘವೇಂದ್ರ ಯೋಗ ಕೇಂದ್ರದ ಸಹ
ಯೋಗದೊಂದಿಗೆ ಭಾನುವಾರ ಸಾವಿರಾರು ಜನ ಯೋಗಪಟುಗಳ ಸಮ್ಮುಖದಲ್ಲಿ 12 ನೇ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಮನುಷ್ಯನ ಮನಸ್ಸು, ದೇಹ ಹಾಗೂ ಆರೋಗ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಯೋಗಭ್ಯಾಸಕ್ಕೆ ಸಮಯ ಮೀಸಲಿಡಬೇಕು. ಯೋಗದಿಂದ ರೋಗ ಮುಕ್ತರಾಗಿ ಮನುಷ್ಯರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಯೋಗವನ್ನು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ದಿನನಿತ್ಯ ಅಭ್ಯಾಸ ಮಾಡುವ ಮೂಲಕ ಆರೋಗ್ಯವಂತರಾಗಿರಬಹುದು. ವಿದ್ಯಾರ್ಥಿಗಳು ಸಹ ನಿತ್ಯ ಯೋಗದೊಂದಿಗೆ ದಿನ ಪ್ರಾರಂಭಿಸಬೇಕು. ಯೋಗದ ಮೂಲಕ ಹಲವು ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಬಹುದಾಗಿದೆ. ಅಲ್ಲದೆ ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಹುಟ್ಟಿದ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದ ಕೀರ್ತಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆದ್ದರಿಂದಲೇ ಇಂದು ವಿಶ್ವದ 176 ದೇಶಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್ ಕುಮಾರ್, ಪುರಸಭೆ ಮುಖ್ಯಧಿಕಾರಿ ಬಸವರಾಜ್ ಸಿಗ್ಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಐ ರೇವಣ್ಣ, ನಮನ್ ನಿಮಾನ್ಸ್‌ನ ಡಾ.ಆದ್ಯ ಬೀರಾದಾರ್, ನವೀನ್, ದೇವಸ್ಥಾನ ಇಒ ಯೋಗೀಶ್, ಡಾ.ವಿಜಯ್, ಕೃಷಿ ಸಹಾಯಕ ನಿರ್ದೇಶಕ ಕಾಂತರಾಜು, ಬಿಆರ್‌ಸಿ ಶಿವಮರಿಯಪ್ಪ, ಯೋಗ ಕೇಂದ್ರದ ರುದ್ರಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಯೋಗಪಟುಗಳು ಮತ್ತು ವಿದ್ಯಾರ್ಥಿಗಳಿದ್ದರು.