ಸಕಲೇಶಪುರ ಲಯನ್ಸ್ ಸಭಾಂಗಣದಲ್ಲಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
- ಯೋಗ ಗುರು ಚೇತನ ಗುರೂಜಿ ಅಭಿಪ್ರಾಯ
- ಸಕಲೇಶಪುರದಲ್ಲಿ ಶಿಬಿರ ಸಮಾರೋಪ ಸಮಾರಂಭ
ಸಕಲೇಶಪುರ: ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಯೋಗ ಮತ್ತು ಧ್ಯಾನ ಅವಶ್ಯ ಎಂದು ಯೋಗ ಗುರು ಚೇತನ ಗುರೂಜಿ ಅಭಿಪ್ರಾಯಪಟ್ಟರು.
ಶುಕ್ರವಾರ ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದಿನ ಒತ್ತಡಪೂರ್ಣ ಜೀವನದಿಂದ ಹೊರಬರಲು ಯೋಗ-ಧ್ಯಾನ ಅತ್ಯವಶ್ಯ ಇದರೊಂದಿಗೆ ನಿತ್ಯ ಆಹಾರ ಪದ್ಧತಿ ಸರಿಯಾದ ಪ್ರಮಾಣದಲ್ಲಿರಬೇಕು ಹಾಗೂ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇಟ್ಟುಕೊಳ್ಳುವ ಅಗತ್ಯವಿದ್ದಾಗ ನಾವು ಆರೋಗ್ಯವಂತರಾಗಿರಬಹುದು ಎಂದು ತಿಳಿಸಿದರು.
ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು. ಜೀವನದ ಪ್ರತಿಯೊಂದು ಕಾರ್ಯವೂ ಆತ್ಮತೃಪ್ತಿಯನ್ನು ನೀಡುವಂತಾಗಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳಿಂದ ಜನರ ಆರೋಗ್ಯ ಹಾನಿಗೊಳಗಾಗುತ್ತಿದೆ. ಆಸ್ಪತ್ರೆಗಳು ಹಣ ಮಾಡುವ ಕೇಂದ್ರಗಳಾಗುತ್ತಿರುವ ಇಂದಿನ ಕಾಲದಲ್ಲಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವ ಜಾಗೃತಿ ಹೊಂದಬೇಕು ಎಂದು ಸಲಹೆ ನೀಡಿದರು.
ಮುಂದುವರಿದ ದೇಶಗಳಲ್ಲಿ ಫಾಸ್ಟ್‌ಫುಡ್ ಬಳಕೆ ಕಡಿಮೆಯಾಗುತ್ತಿದ್ದು, ಯೋಗ-ಧ್ಯಾನ ಸೇರಿದಂತೆ ವೆಲ್‌ನೆಸ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆದರೆ ಭಾರತದಲ್ಲಿ ರಕ್ತದ ಒತ್ತಡ, ಮಧುಮೇಹ ಮುಂತಾದ ರೋಗಗಳಿಗೆ ಔಷಧಗಳ ಅವಲಂಬನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯಿಂದ 12 ದಿನಗಳ ಕಾಲ ಉಚಿತವಾಗಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಆಸಕ್ತರು ಭಾಗವಹಿಸಿದ್ದರು. ಲಯನ್ಸ್ ಸಂಸ್ಥೆ ಜಿಲ್ಲಾ ಮುಖಂಡ ಡಾ.ನವೀನ್ ಚಂದ್ರಶೆಟ್ಟಿ, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬಸವರಾಜು, ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ರಂಗನಾಥ್, ಲಕ್ಷ್ಮಣ ಕೀರ್ತಿ, ಜಗದೀಶ್, ಗೀತಾ ಇತರರು ಇದ್ದರು.