ಹಾಸನ ಉಪವಿಭಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಕುರಿತು ತರಬೇತಿ ಮತ್ತು ಒಂದು ದಿನದ ವಿಶೇಷ ತರಬೇತಿ ಶಿಬಿರ ನಡೆಯಿತು. 
ಹಾಸನ

ಯಶಸ್ವಿನಿ ಆರೋಗ್ಯ ವಿಮೆ ರೈತರಿಗೆ ವರದಾನ

ಪ್ರಮುಖ ಮುಖ್ಯಾಂಶಗಳು

  • ಯಶಸ್ವಿನಿ ಆರೋಗ್ಯ ವಿಮೆ ರೈತರಿಗೆ ವರದಾನ
  • ಸೋಮನಹಳ್ಳಿ ನಾಗರಾಜ್ ಅಭಿಪ್ರಾಯ
  • ಡೇರಿ ಕಾರ್ಯದರ್ಶಿಗಳಿಗೆ ತರಬೇತಿ
ಹಾಸನ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ ಮತ್ತು ಸಹಕಾರ ಇಲಾಖೆ ಆಶ್ರಯದಲ್ಲಿ ಬುಧವಾರ ಹಾಸನ ಉಪವಿಭಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಕುರಿತು ತರಬೇತಿ ಮತ್ತು ಒಂದು ದಿನದ ವಿಶೇಷ ತರಬೇತಿ ಶಿಬಿರ ನಡೆಯಿತು.
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಸಿಇಒ ಮತ್ತು ಕಾರ್ಯದರ್ಶಿಗಳ ಪಾತ್ರ ಮುಖ್ಯವಾಗಿದ್ದು, ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯೂ ರೈತರಿಗೆ ತುಂಬ ಉಪಯುಕ್ತವಾಗಿದೆ. ಈ ಯೋಜನೆಯನ್ನು ರೈತರ ಅನುಕೂಲಕ್ಕಾಗಿ ಅನುಷ್ಠಾನಕ್ಕೆ ಬಂದಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಪ್ರಕಾಶ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಪಟ್ಟಣ ಮತ್ತು ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು. ಆ ಮುಖೇನ ಗ್ರಾಮೀಣ ಮತ್ತು ಪಟ್ಟಣ ವಾಸಿಗಳು ಸಹಕಾರ ಸಂಘಗಳ ಸದಸ್ಯರಿಗೆ ನೆರವಾಗಬೇಕೆಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವಿ.ಎನ್.ರಾಜಣ್ಣ, ಪುಟ್ಟಸ್ವಾಮಿಗೌಡ, ಸೋಮಣ್ಣ, ಎಚ್‌ಡಿಸಿಸಿ ಬ್ಯಾಂಕಿನ ಎಲ್ಲ ಕ್ಷೇತ್ರಾಧಿಕಾರಿಗಳು ಮತ್ತು ಅನುಪ್ ಬಲರಾಮು, ಸಹಕಾರ ಸಂಘಗಳ ಉಪನಿಬಂಧಕ ಕೆ.ಕೆ.ಕಿರಣ್ ಕುಮಾರ್, ನಿರ್ದೇಶಕ ಜಿ.ಎಚ್.ಸಿದ್ದೇಶ್, ಯೂನಿಯನ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಭಾರತಿ, ಒಕ್ಕೂಟದ ನಿರ್ದೇಶಕ ಪುಟ್ಟಸ್ವಾಮಿಗೌಡ, ವಾಣಿ ಇತರರಿದ್ದರು.