ಖಜಾನೆಯಲ್ಲಿದ್ದ ಚಿನ್ನದ ಆಭರಣಗಳನ್ನು ಯುಗಾದಿಯಂದು ಶ್ರೀ ಚನ್ನಕೇಶವಸ್ವಾಮಿ ದೇವರ ಮೂರ್ತಿಗೆ ಅಲಂಕರಿಸಿ ಪೂಜೆ ಸಲ್ಲಿಸಿರುವುದು.
ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಯುಗಾದಿ ಹಬ್ಬದ ದಿನದಿಂದಲೇ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ, ಖಜಾನೆಯಿಂದ ಮೆರವಣಿಗೆಯಲ್ಲಿ ತಂದ ದೇವರ ಆಭರಣಗಳನ್ನು ಗುರುವಾರ ದೇವರ ಮೂರ್ತಿಗೆ ಅಲಂಕರಿಸಿ ನೂರಾರು ಭಕ್ತರ ಸಮ್ಮುಖದಲ್ಲಿ ಅರ್ಚಕರು ಹಬ್ಬದ ವಿಶೇಷ ಪೂಜೆ ನೆರವೇರಿಸಿದರು.
ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್ ಮಾತನಾಡಿ, ಯುಗಾದಿ ಹಬ್ಬದ ದಿನದಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಆಭರಣಗಳ ಅಲಂಕಾರ ಹಾಗೂ ಪಂಚಾಂಗ ಶ್ರವಣದೊಂದಿಗೆ ಉತ್ಸವಗಳಿಗೆ ಚಾಲನೆ ನೀಡಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಬ್ರಹ್ಮ ರಥೋತ್ಸವದವರೆಗೂ ನಿರಂತರವಾಗಿ ಜರುಗಲಿವೆ. ರಥೋತ್ಸವ ನಡೆಯುವುದಕ್ಕೂ ಮುನ್ನ ಪ್ರತಿದಿನವೂ ದೇವರ ವಿವಿಧ ಉತ್ಸವಗಳು ನೆರವೇರಲಿದ್ದು, ಅಂತಿಮವಾಗಿ ಹನಮಂತೋತ್ಸವ ಹಾಗೂ ಗರುಡೋತ್ಸವ ನೆರವೇರಿದ ನಂತರ ದೇವಾಲಯದ ಆವರಣದಲ್ಲಿ ಮಂಟಪೋತ್ಸವಗಳು ನೆರವೇರಲಿವೆ. ಪ್ರಮುಖ ಆಕರ್ಷಣೆಯಾದ ಬ್ರಹ್ಮರಥೋತ್ಸವದ ದಿನ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ. ಧಾರ್ಮಿಕ ವಿಧಿವಿಧಾನಗಳ ಜತೆಗೆ ನಾಮ ಸಂಕೀರ್ತನೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದರು. ಅರ್ಚಕ ನರಸಿಂಹ ಪ್ರಿಯಾ ಭಟ್ಟರ್ ಇದ್ದರು.