ಬೇಲೂರಿನಲ್ಲಿ ತಾಲೂಕು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.  
ಹಾಸನ

ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಅಭಿಮತ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
  • ರಾಷ್ಟ್ರದ ಅಭಿವೃದ್ಧಿಯಲ್ಲೂ ವನಿತೆಯರ ಪಾತ್ರ ಪ್ರಮುಖ
ಬೇಲೂರು: ದೇಶದ ಬೆನ್ನೆಲುಬಾಗಿರುವ ರೈತರಂತೆ ಮಹಿಳೆಯರೂ ದೇಶದ ಬಹುಮುಖ್ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಶಿಲ್ಪಕಲಾ ಮಹಿಳಾ ಒಕ್ಕೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ಶನಿವಾರ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷ ಸಾಧಕನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾರೆಯೋ ಹಾಗೆ ಮಹಿಳೆಯರಿಗೂ ಪುರುಷರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಮಹಿಳೆ ಒಬ್ಬ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ ಈ ದೇಶಕ್ಕೆ ಕಾವಲಾಗಿ, ಕುಟುಂಬ ಮತ್ತು ಸಮಾಜದ ಏಳಿಗೆಗಾಗಿ ದುಡಿಯುತ್ತಾರೆ. ಆದ್ದರಿಂದ ನಾವು ಅವರನ್ನು ಗೌರವಿಸಬೇಕು. ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರ ಎಂಬುದನ್ನು ಮರೆಯಬಾರದು ಎಂದರು.
ತಾಲೂಕಿನ ಹಗರೆಯಲ್ಲಿರುವ ಸ್ತ್ರೀ ಶಕ್ತಿ ಸಂಘದ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗುತ್ತೇನೆ. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಶೇ.33ರಷ್ಟು ಮಹಿಳಾ ಮೀಸಲಾತಿ ನೀಡುತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮಹಿಳೆಯರು ಹೆಚ್ಚಿನ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಮಹಿಳೆಯರು ಕುಟುಂಬದ ಜತೆಯಲ್ಲಿ ಹಲಾವರು ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಅಂಗನವಾಡಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಯಕರ್ತೆಯವರು ಉತ್ತಮವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದರು.
ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಭಾರತೀಗೌಡ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಇಂಪಾ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಕಾಮಾಕ್ಷಿ ರಾಜು, ತಾಪಂ ಮಾಜಿ ಅಧ್ಯಕ್ಷೆ ಕಮಲಾ ಚನ್ನಪ್ಪ, ಉಪನ್ಯಾಸಕಿ ಚಿಕ್ಕಮಗಳೂರಿನ ನಾಗಶ್ರೀ, ನಾಗರತ್ನಾ ಇತರರು ಇದ್ದರು.