ಬೇಲೂರು ಪಟ್ಟಣದ ಸರ್ವೋದಯ ವಿದ್ಯಾಸಂಸ್ಥೆ ಆವರಣ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ಬಿ.ಬಿ.ಶಿವರಾಜ್, ಭಾರತೀಗೌಡ, ಪ್ರಕಾಶ್, ಮೆಹಬೂಬ್ ಖಾನ್ ಇದ್ದರು.
- ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಅಭಿಮತ
ಬೇಲೂರು : ಗಂಡ ಮನೆ ಮಕ್ಕಳು ಎಂಬ ಸಂಸಾರದ ಜಂಜಾಟದ ನಡುವೆ ಮಹಿಳೆಯರಿಗೆ ಸಂಘ ಸಂಸ್ಥೆಗಳು ನಡೆಸುವ ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕವಾಗಿ ಗಟ್ಟಿಗೊಳ್ಳಲು ಸಹಕಾರಿಯಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಹೇಳಿದರು.
ಪಟ್ಟಣದ ಸರ್ವೋದಯ ವಿದ್ಯಾಸಂಸ್ಥೆ ಆವರಣದ ಮೈದಾನದಲ್ಲಿ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಹಾಗೂ ಸಂಘಟಿತ ಶಕ್ತಿಯ ಮಹತ್ವದ ಅರಿವು ಹೆಚ್ಚಾಗುತ್ತಿದೆ. ಜತೆಗೆ ಮಹಿಳೆಯರು ಅಂತರಿಕ್ಷ ಯಾನ, ಸೈನ್ಯ, ಶಿಕ್ಷಣ, ರಾಜಕೀಯ, ಕ್ರೀಡೆ, ಉದ್ಯಮ, ಸಾಹಿತ್ಯ, ವಿಮಾನ, ಮೆಟ್ರೋ ರೈಲು ಚಾಲನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಷ್ಟೇ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಲ್ಲದೇ ಕುಟುಂಬದ ಜವಾಬ್ದಾರಿಗಳೊಂದಿಗೆ ಸಮಾಜ ಮುಖಿಯಾಗಿ ತೊಡಗಿಸಿಕೊಂಡು ಮುಂಚೂಣಿಗೆ ಬರುತ್ತಿರುವುದು ಶ್ಲಾಘನೀಯ. 8 ವರ್ಷಗಳಿಂದ ತಾಲೂಕು ಒಕ್ಕಲಿಗರ ಮಹಿಳಾ ಸಂಘವು ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯ ಶಿಬಿರ, ಜಾಗೃತಿ ಕಾರ್ಯಕ್ರಮ, ಮಹಿಳಾ ಸಬಲೀಕರಣ ಕಾರ್ಯಾಗಾರಗಳು, ಸಾಮೂಹಿಕ ಸತ್ಯನಾರಾಯಣ ಪೂಜೆ, ಗೃಹೋಪಯೋಗಿ ವಸ್ತು ಪ್ರದರ್ಶನ, ವಿದ್ಯಾರ್ಥಿಗಳಿಗೆ ಸಹಾಯಧನ, ಕ್ರೀಡಾ ಕೂಟದಂತಹ ಕಾರ್ಯಕ್ರಮ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಕಾನೂನು ಅರಿವು ನೀಡುವಂತಹ ಕಾರ್ಯಕ್ರಮ ರೂಪಿಸಲಿ ಎಂದರು.
ಒಕ್ಕಲಿಗರ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾರತೀಗೌಡ ಮಾತನಾಡಿ, ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಕ್ರಮಗಳು, ಆರೋಗ್ಯ ತಪಾಸಣಾ ಶಿಬಿರಗಳು, ಸ್ವಯಂ ಉದ್ಯೋಗ ತರಬೇತಿ ಕಾರ್ಯಾಗಾರಗಳು ಹಾಗೂ ಯುವತಿಯರಿಗೆ ಮಾರ್ಗದರ್ಶನ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಸಂಘದ ಎಲ್ಲ ಸದಸ್ಯರ ಸಹಕಾರದಿಂದ ನಮ್ಮ ಸಂಘ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದರು.
ಸರ್ವೋದಯ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರಕಾಶ್, ದೈಹಿಕ ಶಿಕ್ಷಕ ಮೆಹಬೂಬ್ ಖಾನ್ ಹಾಗೂ ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರಿದ್ದರು.