ಅರಕಲಗೂಡು ತಾಲೂಕಿನ ಬಾಗದಾಳು ಗ್ರಾಮದಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ಮುರಿದು ಹಾನಿಪಡಿಸಿರುವುದು. 
ಹಾಸನ

ಕಾಫಿ ತೋಟಕ್ಕೆ ಕಾಡಾನೆಗಳು ನುಗ್ಗಿ ಬೆಳೆ ಹಾನಿ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಬಾಗದಾಳು ಗ್ರಾಮದಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕಾಫಿ ಬೆಳೆಗಾರರ ಸಂಘದ ಎಚ್‌ಡಿಪಿಎ ನಿರ್ದೇಶಕರಾದ ಬಿ.ಜೆ.ಕಾಂತರಾಜು ಅವರಿಗೆ ಸೇರಿದ ಕಾಫಿ ತೋಟಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳು ನುಗ್ಗಿ ಬೆಳೆಗಳನ್ನು ಹಾನಿಪಡಿಸಿವೆ.
ಕೊಡಗಿನ ಗಡಿ ಭಾಗ ಹಾಗೂ ಬೈಸೂರು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ತುಳಿದು ಹಾನಿಪಡಿಸಿದ್ದು, ಸಿಲ್ವರ್ ಮರ ಹಾಗೂ ಬಾಳೆ ಗಿಡಗಳನ್ನು ಮುರಿದಿವೆ. ಅಲ್ಲದೆ ಮಾವಿನ ಮರದ ಕೊಂಬೆಯನ್ನೂ ಮುರಿದು ತೋಟದಲ್ಲಿ ಸಾಕಷ್ಟು ನಷ್ಟ ಉಂಟುಮಾಡಿವೆ. ರಾತ್ರಿ ವೇಳೆ ಕಾಡಾನೆ ಕಾಣಿಸಿಕೊಂಡಿರುವುದರಿಂದ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕಾಡಾನೆಗಳ ನಿರಂತರ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದು, ರಾತ್ರಿ ಹೊತ್ತು ತೋಟ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕಾಡಾನೆಗಳನ್ನು ಕಾಡಿನತ್ತ ಓಡಿಸುವುದು ಹಾಗೂ ಗ್ರಾಮೀಣ ಭಾಗಗಳಿಗೆ ನುಗ್ಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.