ಎಚ್.ಕೆ.ಕುಮಾರಸ್ವಾಮಿ 
ಹಾಸನ

ಎರಡೂವರೆ ವರ್ಷದಲ್ಲಿ ಜಿಲ್ಲೆಗೆ ಸರ್ಕಾರದ ಕೊಡುಗೆ ಏನು?

ಪ್ರಮುಖ ಮುಖ್ಯಾಂಶಗಳು

  • ಎರಡೂವರೆ ವರ್ಷದಲ್ಲಿ ಜಿಲ್ಲೆಗೆ ಸರ್ಕಾರದ ಕೊಡುಗೆ ಏನು?
  • ಬಹಿರಂಗಪಡಿಸಲು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಆಗ್ರಹ
ಹಾಸನ: ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಏನು ಹೊಸ ಕೊಡುಗೆ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಜೆಡಿಎಸ್ ಆಗ್ರಹಿಸಿದೆ.
ಮೊನ್ನೆ ಸಿಎಂ, ಡಿಸಿಎಂ ಹಾಗೂ ಇತರರು ನಡೆಸಿದ ಕಾರ್ಯಕ್ರಮ ಮೇಲ್ನೋಟಕ್ಕೆ ಪಕ್ಷಾತೀತ ಎನಿಸಿದರೂ ಅದು ಕಾಂಗ್ರೆಸ್ ಕಾರ್ಯಕ್ರಮ ಎಂಬುದು ಹಿಡನ್ ಅಜೆಂಡಾ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು.
ಸರ್ಕಾರದಿಂದಲೇ ಜಾಹೀರಾತು ನೀಡಿದ್ದರೂ ಇದು ಯಾರ ದುಡ್ಡು, ಕೃಷ್ಣ ಬೈರೇಗೌಡ ಒಳ್ಳೇ ಕೆಲಸ ಮಾಡಿದ್ದಾರೆ. ಆದರೆ ಅಂದು ಎಲ್ಲ ಫಲಾನುಭವಿಗಳು ಬಂದಿದ್ದರಾ? ಸಾಂಕೇತಿಕವಾಗಿ ಸವಲತ್ತು ಸಮರ್ಪಣೆ ಮಾಡಿದ್ದಾರೆ. ಉಳಿದವು ಎಲ್ಲಿ ಹೋದವು? ಎಂದು ಪ್ರಶ್ನಿಸಿದರು.
ಬಡಜನರು ಸರ್ಕಾರಿ ಕಚೇರಿ ಅಲೆಯಬೇಕಿದೆ. ಅವರಿಗೆ ಹಳ್ಳಿಯಲ್ಲೇ ತಲುಪಿಸುವ ಕೆಲಸ ಏಕೆ ಮಾಡಲಿಲ್ಲ? ಎಂಬುದು ನಮ್ಮ ತಕರಾರು. ಎರಡೂವರೆ ವರ್ಷದಲ್ಲಿ ಎಷ್ಟು ಕಾಮಗಾರಿ ಮಂಜೂರು ಮಾಡಿ, ಅನುದಾನ ಬಿಡುಗಡೆ ಮಾಡಿದ್ದಾರೆ. ಎಷ್ಟು ಹೊಸ ಕಾಮಗಾರಿ ಕೊಟ್ಟಿದ್ದಾರೆ. ಎಷ್ಟು ಉದ್ಘಾಟನೆ ಮಾಡಿದ್ದೀರಿ ಹೇಳಿ? 298 ಕೋಟಿ ರೂ.ಗಳಲ್ಲಿ ನಿಮ್ಮ ಕೊಡುಗೆ ಎಷ್ಟು? ತಮ್ಮದೇನು ಸಾಧನೆ? ಎಂದು ಪ್ರಶ್ನಿಸಿದರು.
ನೀವು ಖರ್ಚು ಮಾಡಿದ ದುಡ್ಡು ಜನರದ್ದು ಎಂದ ಕುಮಾರಸ್ವಾಮಿ, ಇದು ಯಾವ ಗ್ಯಾರಂಟಿ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಹೇಮಾವತಿ ಜಲಾಶಯ ಬಲಿ ಉದ್ಯಾನವನ ಆಗಲಿ ಎಂದ ಅವರು, ಈ ಸರ್ಕಾರದಲ್ಲಿ ಹಗರಣ, ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿ ಇಲ್ಲವಾಗಿದೆ ಎಂದು ದೂರಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷರಾಗುತ್ತಿದ್ದ ಸಂಪ್ರದಾಯ ಕಿತ್ತುಕೊಂಡಿರುವುದಕ್ಕೆ ಅಸಮಾಧಾನ ಹೊರ ಹಾಕಿದರು.
ಇದೇ ವೇಳೆ ಸರ್ಕಾರದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ, ಬಹಿರಂಗ ಚರ್ಚೆಗೆ ಬರಲಿ ಎಂದು ಅರಸೀಕೆರೆ ಶಾಸಕ ಕೆಎಂಶಿ ಆಗ್ರಹಕ್ಕೆ, ಅವರೇ ನಿಗದಿ ಮಾಡಲಿ ನಾವು ಹೋಗುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ಯಾವ ಕ್ಷೇತ್ರಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಲಿ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಸವಲತ್ತು ಸಮರ್ಪಣಾ ಸಮಾವೇಶವನ್ನು ಅರಸೀಕೆರೆಯಲ್ಲಿ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು. ಇವರು ಹೊಸ ಯೋಜನೆ ಏನು ಕೊಟ್ಟಿದ್ದಾರೆ? ರಿಯಲ್ ಎಸ್ಟೇಟ್‌ನವರಿಗೆ ಬೇಗ ಕೆಲಸ ಆಗಲಿದೆ. ಅನೇಕ ಕಡೆ ಸರ್ವೇ ಆದರೂ ಪೋಡಿ, ದುರಸ್ತಿ ಆಗಿಲ್ಲ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಟ್ಟಿಲ್ಲ, ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆದಿಲ್ಲ. ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವ ಕೆಲಸ-ಕಾರ್ಯಗಳ ಬಗ್ಗೆ ಡಿಸಿ ಅವರು ಪಟ್ಟಿ ಕೊಡಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಸಮೀರ್ ಇದ್ದರು.