ಜೆಡಿಎಸ್ ಬೆಳ್ಳಿ ಸಂಭ್ರಮ ಜನತಾ ಸಮಾವೇಶ
- ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ
- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗು
- ಜೆಡಿಎಸ್ ಬೆಳ್ಳಿ ಸಂಭ್ರಮ ಜನತಾ ಸಮಾವೇಶ
- ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಸಮಾಗಮ
ಹಾಸನ: ಕಾಂಗ್ರೆಸ್ ಹಾಸನದಲ್ಲಿ ಎರಡು ಬಾರಿ ಸಮಾವೇಶ ಮಾಡುವ ಮೂಲಕ ಜೆಡಿಎಸ್ ಶಕ್ತಿ ಕುಂದಿದೆ ಎಂದು ಹೇಳಲು ಹೊರಟಿದೆ. ಆದರೆ ಇಂದು ಜೆಡಿಎಸ್ ಪ್ರಭಲವಾಗಿದೆ ಎಂಬುದನ್ನು ತೋರಿಸಿದ್ದೇವೆ. ರೈತನ ಮಗನನ್ನು ಹಳ್ಳಿಯಿಂದ ದಿಲ್ಲಿಗೆ ಕಳುಹಿಸಿದ್ದ ಜಿಲ್ಲೆಯ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗುಡುಗಿದರು.
ಜೆಡಿಎಸ್ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಗರದ ಬೂವನಹಳ್ಳಿ ಬಳಿಯ ಬಿಜಿಎಸ್‌ಕೆ ಬಡಾವಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್ ಬೆಳ್ಳಿ ಸಂಭ್ರಮ ಜನತಾ ಸಮಾವೇಶದಲ್ಲಿ ಮಾತನಾಡಿದರು.
ಜೆಡಿಎಸ್ ಪ್ರಬಲವಾಗಿದೆ ಎಂಬ ಸಂದೇಶವನ್ನು ಈ ಮೂಲಕ ನಾಡು, ರಾಷ್ಟ್ರಕ್ಕೆ, ವಿರೋಧಿಗಳಿಗೆ ನೀಡಲಾಗಿದೆ. 10 ವರ್ಷದ ಹಿಂದೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಎಸ್.ಪ್ರಕಾಶ್ ಅವರು ಸೋಲಬೇಕಾಯಿತು. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ರೇವಣ್ಣ ಅವರನ್ನು ತುಳಿಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ರೇವಣ್ಣ ಅವರನ್ನು ಎಸ್‌ಐಟಿ ಮೂಲಕ ಬಂಧಿಸಿದ ಪೊಲೀಸರನ್ನು ಸನ್ಮಾನಿಸಲಾಗುತ್ತಿದೆ. ರೇವಣ್ಣ ಕುಟುಂಬವನ್ನು ಮುಗಿಸಲು ಸಹಕರಿಸಿದ ಎಸ್‌ಐಟಿ ತಂಡಕ್ಕೆ ಬಹುಮಾನ ನೀಡಲಾಗುತ್ತಿದೆ. ನಾನು ಯಾರ ಹಂಗಿಗೆ ತಲೆಬಾಗಿಲ್ಲ, ದುಡಿದಿದ್ದೇನೆ. ಕಷ್ಟಪಟ್ಟಿದ್ದೇನೆ ಎಂದು ಹೇಳಿದರು.
ಸಾಯುವ ಸಂದರ್ಭದಲ್ಲಿ ಎಲ್ಲರೂ ಬೆಂಬಲ ನೀಡಿದ್ದೀರಿ. ಲಕ್ಷಾಂತರ ಜನರು ಆಗಮಿಸುವ ಮೂಲಕ ಆಳುವ ಪಕ್ಷಕ್ಕೆ ಸಂದೇಶ ರವಾನೆ ಮಾಡಲಾಗಿದೆ. ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗಿದ್ದು, ರಾಷ್ಟ್ರದ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ಹೇಳಿದರು.
ರಾಜ್ಯಕ್ಕೆ ನೀರಾವರಿ, ರೈಲ್ವೆ ಸೇರಿದಂತೆ ಸಾಕಷ್ಟು ಇಲಾಖೆಗಳಿಗೆ ಕೊಡುಗೆ ನೀಡಲಾಗಿದೆ. ಜಿಲ್ಲೆ ಶಾಲಾ-ಕಾಲೇಜು, ಆಸ್ಪತ್ರೆ ತರಲಾಗಿದ್ದು, ಐಐಟಿ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮನವಿ ಮಾಡಲಾಗುವುದು ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ರೇವಣ್ಣ ಹಾಗೂ ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸುತ್ತಾರೆ. ದೇವೇಗೌಡರ ಮಗನಾಗಿ ಅವುಗಳಿಗೆ ಉತ್ತರಿಸುತ್ತಿದ್ದೇನೆ. ಹಾಸನ ಜಿಲ್ಲೆಗೆ ಮೂರು ಇಂಜಿನಿಯರ್ ಕಾಲೇಜು, 30ಕ್ಕೂ ಹೆಚ್ಚು ಪಿಯು ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ದೇವೇಗೌಡರು ಬದುಕಿನ ಉದ್ದಕ್ಕೂ ನೀರಾವರಿ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ರಾಜ್ಯ ಸರ್ಕಾರದ ಎರಡೂವರೆ ವರ್ಷದ ಸಾಧನೆ ಶೂನ್ಯವಾಗಿದ್ದು, ರೈತರಿಗೆ ಸರಿಯಾಗಿ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ತೆರೆಯದೆ ಸಂಕಷ್ಠ ಅನುಭವಿಸುವಂತಾಗಿದೆ. ಎರಡೂವರೆ ವರ್ಷ ಅವಧಿಯಲ್ಲಿ 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಪಶ್ಚಾತಾಪ ಇಲ್ಲ ಎಂದು ಕಿಡಿಕಾರಿದರು.
ಕೊಡುಗೆಗಳ ದಾಖಲೆ ನೀಡಲು ಸಿದ್ಧ: ಕಾಂಗ್ರೆಸ್ ಅವಧಿಯಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಸರ್ಕಾರ ಹಣಕ್ಕಾಗಿ ಜನರನ್ನು ಕುಡಿಯಲು ಪ್ರೋತ್ಸಾಹಿಸುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ದೂರಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಜೆಡಿಎಸ್ ಹಾಗೂ ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ಗೆ ನಮ್ಮ ಆಡಳಿತಾವಧಿಯಲ್ಲಿ ನೀಡಿರುವ ಕೊಡುಗೆಗಳ ಬಗ್ಗೆ ದಾಖಲೆ ನೀಡಲು ಸಿದ್ಧ. ಅಥವಾ ಚರ್ಚೆಗೆ ಸಿದ್ಧನಿದ್ದೇನೆ ಎಂದು ಎಂದು ಸವಾಲು ಹಾಕಿದರು.
ಹಿಂದೆ ಒಲ್ಲದ ಮನಸ್ಸಿನಿಂದ 14 ತಿಂಗಳು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಬೇಕಾಯಿತು. ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಬೆಂಬಲಿಸುವ ಮೂಲಕ ದರಿದ್ರ ಸರ್ಕಾರವನ್ನು ಕಿತ್ತೊಗೆಯಲು ಇಲ್ಲಿಂದಲೇ ಪ್ರಯತ್ನ ನಡೆಯಬೇಕು ಎಂದು ಕರೆ ನೀಡಿದರು.
ರೇವಣ್ಣನನ್ನು ಹೆದರಿಸುವುದು ಹಗಲುಗನಸು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ತನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಕಿಡಿಕಾರಿದರು.
ರೇವಣ್ಣ ಅವರನ್ನು ಹೆದರಿಸುತ್ತೇನೆ ಎಂದುಕೊಂಡಿದ್ದರೆ ಅದು ಹಗಲುಗನಸು. ಕುತಂತ್ರ ರಾಜಕೀಯ, ನಿಮ್ಮ ಹೆದರಿಕೆಗೆ ರೇವಣ್ಣ ಬಗ್ಗಲ್ಲ. ಕೇಸು ಹಾಕಿಸುತ್ತೀರಾ? 2028ಕ್ಕೆ ಹಾಸನದಿಂದಲೇ ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ. ವಚನ ಭ್ರಷ್ಟ ಸರ್ಕಾರ ಒಂದಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದರು.
ಹಾಸನದಲ್ಲಿ ರಾಷ್ಟ್ರೀಯ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಒಬ್ಬರು ಯಾವ ಪಕ್ಷದಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಕಳೆದ ಎಂಪಿ ಚುನಾವಣೆಯಲ್ಲಿ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಯಾರ ಪರ ಕೆಲಸ ಮಾಡಿದ್ದಾರೆ ಎಂಬುದನ್ನು ರಾಜ್ಯ ನಾಯಕರು ಕೇಳಬೇಕೆಂದರು. ಜಿಲ್ಲೆಗೆ ಜೆಡಿಎಸ್ ಕೊಡುಗೆ ಅಪಾರ ಇದೆ. ರಸ್ತೆ, ರೈಲ್ವೆ, ನೀರಾವರಿ, ಶೈಕ್ಷಣಿಕ, ಆರೋಗ್ಯ, ಸಾರಿಗೆ ಪ್ರತಿಯೊಂದು ಕ್ಷೇತ್ರಕ್ಕೂ ಜೆಡಿಎಸ್ ಕೊಡುಗೆ ಇದೆ ಎಂದು ಹೇಳಿದರು.
ಜನರತ್ತ ಕೈ ಬೀಸಿದ ದೇವೇಗೌಡ: ವ್ಹೀಲ್‌ಚೇರ್ ಮೂಲಕ ರ‌್ಯಾಂಪ್‌ನಲ್ಲಿ ಆಗಮಿಸಿದ ಎಚ್.ಡಿ.ದೇವೇಗೌಡ ಜರತ್ತ ಕೈ ಬೀಸಿದರು. ಕಾರ್ಯಕರ್ತರು ಜೈ ಜೆಡಿಎಸ್, ಜೈ ದೇವೇಗೌಡ ಎಂಬ ಘೋಷಣೆಗಳು ಮೊಳಗಿದವು. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕೂಡ ಜನರ ನಡುವೆ ರ‌್ಯಾಂಪ್ ಮೂಲಕ ಆಗಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಘೋಷಣೆ ಮೊಳಗಿದವು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸಹೋದರ ನಿಖಿಲ್ ಕುಮಾರಸ್ವಾಮಿ ಅವರನ್ನು ಅಪ್ಪಿಕೊಳ್ಳುವ ಮೂಲಕ ಸ್ವಾಗತಿಸಿದರು.
ಕಾರ್ಯಕ್ರಮದ ನಡುವೆ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ಬಹುತೇಕ ಕುರ್ಚಿಗಳು ಭರ್ತಿಯಾಗಿದ್ದು, ಕಾರ್ಯಕರ್ತರು ಹತ್ತಿರದಿಂದ ಕಾರ್ಯಕ್ರಮ ವೀಕ್ಷಿಸಲು ತಳ್ಳಾಡಿದರು. ಈ ಸಂದರ್ಭ ಎಚ್.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ಕಾರ್ಯಕರ್ತರ ಬಳಿ ತೆರಳಿ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ಮಾಡಿದರು.
ಎರಡು ವರ್ಷ ಅವಧಿಯಲ್ಲಿ ಕಾಂಗ್ರೆಸ್ ಹಾಸನದಲ್ಲಿ ಎರಡು ಸಮಾವೇಶ ಮಾಡುವ ಮೂಲಕ ತನ್ನ ಸಾಮಾರ್ಥ್ಯ ಪ್ರದರ್ಶಿಸಿತ್ತು. ಅಲ್ಲದೆ ಸದ್ಯದ ಹಲವು ವಿದ್ಯಮಾನಗಳಿಂದ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗುತ್ತಿದೆ ಎಂಬ ಚರ್ಚೆಯ ನಡುವೆ ಶನಿವಾರ ಜೆಡಿಎಸ್ ಶಕ್ತಿ ಪ್ರದರ್ಶನದ ಮೂಲಕ ತನ್ನ ಅಸ್ತಿತ್ವ ಸಾಬೀತುಪಡಿಸಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದರು. ಹಾಸನದಿಂದಲೇ ಕಾಂಗ್ರೆಸ್ ನಿರ್ನಾಮ ಮಾಡುವ ಸವಾಲನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಎಸೆದರು.
ಹಾಸನ ಜಿಲ್ಲೆಗೆ ಜೆಡಿಎಸ್ ಸಾಕಷ್ಟು ಕೊಡುಗೆ ನೀಡಿದೆ. ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಬಿಡಿಗಾಸು ಹಣವನ್ನು ನೀಡದೆ ರಾಜ್ಯ ಸರ್ಕಾರ ವಂಚಿಸಿದೆ. 2028ರ ಚುನಾವಣೆ ನಿಟ್ಟಿನಲ್ಲಿ ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು. 2028ರಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವುದು ಶತಸಿದ್ಧ.
ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದವರಿಗೆ ವೇದಿಕೆ ಮೂಲಕ ಉತ್ತರ ನೀಡುತ್ತಿದ್ದೇವೆ. ರೈತರ ಹಾಗೂ ಜೆಡಿಎಸ್ ಶಕ್ತಿಯನ್ನು ರಾಜ್ಯದ ಜನತೆ ತೋರಿಸಲಾಗಿದೆ. ರೈತರ ಹಾಗೂ ಬೆಳೆಗಾರರ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಎಲ್ಲರೂ ಸಹಕಾರ ನೀಡಬೇಕು.
ರಾಜ್ಯದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎಂಬುದಕ್ಕೆ ಈ ಸಭೆಯೇ ಸಾಕ್ಷಿ. ರಾಷ್ಟ್ರ ಮಟ್ಟದಲ್ಲಿ ಹಾಸನದ ಗುರುತು ಮೂಡಿಸಿದವರು ದೇವೇಗೌಡರು. ಅದೇ ರೀತಿ ಸಾಲ ಮನ್ನಾ ಹಾಗೂ ವಿವಿಧ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಕುಮಾರಸ್ವಾಮಿ ರಾಜ್ಯದ ಮನೆ ಮಾತಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಎಲ್ಲರೂ ಸಹಕಾರ ನೀಡಬೇಕು.
ಕಾರ್ಯಕ್ರಮದ ಮೂಲಕ ಹಾಸನದಿಂದ ರಾಜ್ಯಕ್ಕೆ ಸಂದೇಶ ರವಾನಿಸಲಾಗಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ಎಲ್ಲರೂ ಒಂದಾಗಬೇಕಿದೆ. ಎರಡೂವರೆ ವರ್ಷದಲ್ಲಿ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದೆ. ಪಕ್ಷದ ಬಲವರ್ಧನೆಗೆ ಎಲ್ಲರೂ ಸಹಕಾರ ನೀಡಬೇಕು.
ಜಿಲ್ಲೆ ಹಾಗೂ ರಾಜ್ಯದಲ್ಲಿ ದ್ವೇಷ ರಾಜಕಾರಣದ ನೀರಿನಲ್ಲಿ ಈಜಬೇಕಾದ ಪರಿಸ್ಥಿತಿ ಇದೆ. ದೇವೇಗೌಡರು, ಕುಮಾರಣ್ಣ, ರೇವಣ್ಣ ಅವರು ತಮ್ಮ ರಾಜಕೀಯ ಇತಿಹಾಸದಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಜಿಲ್ಲೆಗೆ ರಾಜ್ಯಕ್ಕೆ ಸಾಕಷ್ಟು ಶಾಶ್ವ್ವತ ಕೊಡುಗೆ ನೀಡಲಾಗಿದೆ. ಕಾಂಗ್ರೆಸ್ ಸವಲತ್ತು ಸಮರ್ಪಣ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದೆ.